ಮಕ್ಕಳ, ಮಹಿಳೆಯರ ವಿಶೇಷ ಗ್ರಾಮಸಭೆ. ವೈಶಿಷ್ಟ್ಯ ಮೆರೆದ ಪಡುವರಿ ಪಂಚಾಯತ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪಡುವರಿ ಗ್ರಾಮ ಪಂಚಾಯತ್ ಆಯೋಜಿಸಿದ್ದ ಮಕ್ಕಳ ಮತ್ತು ಮಹಿಳೆಯರ ವಿಶೇಷ ಗ್ರಾಮಸಭೆ ವಿಭಿನ್ನ ಮತ್ತು ವಿಶಿಷ್ಟವಾಗಿ ಮೂಡಿಬಂದಿತು. ಮಹಿಳೆಯರು ಗರಿಷ್ಠ ಸಂಖ್ಯೆಯಲ್ಲಿ ಸೇರಿದ್ದರೆ, ಊರಿನ ಐದುಶಾಲೆಗಳ ಮಕ್ಕಳ ಭಾಗವಹಿಸಿದ್ದರು. ಉಭಯರೂ ಊರಿನ ಸಮಸ್ಯೆಗಳನ್ನು ಮಂಡಿಸಿ, ಗ್ರಾಮ ಪಂಚಾಯತ್‌ನಿಂದ ಪರಿಹಾರ ಬಯಸಿದರು. ಮಹತ್ವದ ವಿಷಯಗಳ ಕುರಿತು ಪರಿಣತರು ಮಾಹಿತಿ ನೀಡಿದರು. ಮಕ್ಕಳಿಗೆ ಸ್ಪರ್ಧೆ ನಡೆಸಿ, ವಿಜೇತರಿಗೆ ಬಹುಮಾನ ವಿತರಣೆಯಾಯಿತು. ಆಸಕ್ತರಿಗೆ ಛಾಯಾಗ್ರಹಣ ಮತ್ತು ವರದಿಗಾರಿಕೆ ತರಬೇತಿ ನೀಡಲಾಯಿತು.

Call us

Click Here

ವಿದ್ಯಾರ್ಥಿನಿ ಪ್ರಿಯಾಂಕಾ ಸ್ವಾಗತಿಸಿದ ಬಳಿಕ ವೇದಿಕೆಯಲ್ಲಿ ಇರಿಸಿದ್ದ ಕಂಬಕ್ಕೆ ಮಕ್ಕಳ ಸಂಘದ ಪ್ರತಿನಿಧಿಗಳು ತಾವು ಗುರುತಿಸಿರುವ ಸಮಸ್ಯೆಗಳನ್ನು ಸಂಕೇತಿಸುವ ಕೆಂಪುಪಟ್ಟಿಗಳನ್ನು ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷೆ ದೀಪಾ ಶೆಟ್ಟಿ ಮತ್ತು ಸದಸ್ಯರು ತಾವು ಪರಿಹರಿಸಿದ ಸಮಸ್ಯೆಗಳನ್ನು ಸಂಕೇತಿಸುವ ಬಿಳಿಪಟ್ಟಿ ಕಟ್ಟುವ ಮೂಲಕ ಗ್ರಾಮಸಭೆಯನ್ನು ವಿಶಿಷ್ಟವಾಗಿ ಉದ್ಘಾಟಿಸಿದರು. ಉಪಾಧ್ಯಕ್ಷ ಸದಾಶಿವ ಡಿ. ಪಡುವರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರಾಮ ಪಂಚಾಯಿತಿ ಲೆಕ್ಕ ಸಹಾಯಕಿ ಜಯಲಕ್ಮೀ ಹಿಂದಿನ ಗ್ರಾಮಸಭೆಯ ಅನುಪಾಲನಾ ವರದಿ ಮಂಡಿಸಿದರು. ವಿದ್ಯಾರ್ಥಿ ಸಂಘಗಳ ಪ್ರತಿನಿಧಿಗಳಾದ ನಾಗೇಂದ್ರ ಪಿ, ನಾಗರತ್ನಾ, ಅಕ್ಷತಾ, ಪ್ರಜ್ವಲ್, ರೂಪೇಶ್, ಮಹಿಳಾ ಪ್ರತಿನಿಧಿಗಳಾದ ಶಾರದಾ, ಸುಜಾತಾ, ಶ್ರೀಕಲಾ, ಶೈಲಜಾ ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಅನುಷ್ಠಾನಿಸಬೇಕಾದ ಯೋಜನೆಗಳನ್ನು ಮುಂದಿಟ್ಟರು.

ಒಂದೆಡೆ ಶಿಕ್ಷಕರು ಮಕ್ಕಳನ್ನು ಚಿತ್ರಕಲೆ, ಆಶುಭಾಷಣ, ರಸಪ್ರಶ್ನೆ, ಗೀತಗಾಯನ, ಕಥಾ ಕಥನ ಸ್ಪರ್ಧೆಗಳಲ್ಲಿ ತೊಡಗಿಸಿದರೆ, ಮಹಿಳೆಯರಿಗೆ ಜಿಲ್ಲಾ ಪಂಚಾಯತ್ ಸ್ವಉದ್ಯೋಗ ತರಬೇತಿ ವಿಭಾಗದ ಪಾಂಡುರಂಗ, ಬ್ರಹ್ಮಾವರ ರುಡ್‌ಸೆಟ್‌ನ ನಿರ್ದೇಶಕ ರಾಘವೇಂದ್ರ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ರಾಘವೇಂದ್ರ ನಾವಡ, ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಶಾಖಾಧಿಕಾರಿ ರವೀಂದ್ರ ಯು. ಎಚ್. ಯೋಗಪರಿಣತ ಮಂಜುನಾಥ ಬಿಜೂರು, ಆರೋಗ್ಯ ಇಲಾಖೆಯ ಭವಾನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ನಿವೇದಿತಾ ವಿವಿಧ ಮಾಹಿತಿ ನೀಡಿದರು. ಪಂಚಾಯತ್ ರಾಜ್ ಪರಿಣತ ಎಸ್. ಜನಾರ್ದನ ಮರವಂತೆ, ಗ್ರಾಮಸಭೆಯ ಔಚಿತ್ಯ ಮತ್ತು ಜನಸಹಭಾಗಿತ್ವದ ಅಗತ್ಯವನ್ನು ವಿವರಿಸಿದರು. ಸಿಡಬ್ಲ್ಯೂಸಿಯ ಜನಾರ್ದನ ಹಾವಂಜೆ ಆಸಕ್ತ ಮಕ್ಕಳಿಗೆ ಛಾಯಾಗ್ರಹಣ ಮತ್ತು ವರದಿಗಾರಿಕೆ ಕುರಿತು ತರಬೇತಿ ನೀಡಿದರು.

ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ ಬಟವಾಡಿ, ತಾಲೂಕು ಪಂಚಾಯತ್ ಉಪಾಧ್ಯಕ್ಷ ಪ್ರವೀಣಕುಮಾರ ಶೆಟ್ಟಿ, ಮಾರ್ಗದರ್ಶಿ ಅಧಿಕಾರಿ ಲಕ್ಷ್ಮೀನಾರಾಯಣ, ತಾಲೂಕು ಪಂಚಾಯತ್ ಸದಸ್ಯೆ ಗಿರಿಜಾ ಖಾರ್ವಿ, ಗ್ರಾಮ ಪಂಚಾಯತ್‌ನ ಎಲ್ಲ ಸದಸ್ಯರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ದಾಸಪ್ಪ ಜಿ, ಸಿಡಬ್ಲ್ಯೂಸಿಯ ಶ್ರೀನಿವಾಸ ಗಾಣಿಗ, ಪ್ರಭಾಕರ ನಾಯಕ್, ಶಿಕ್ಷಣ ಸಂಯೋಜಕ ರೂಪ್ಲಾ ನಾಯಕ್, ಶಿಕ್ಷಕರಾದ ಗಣಪತಿ ಹೋಬಳಿದಾರ್, ರಾಘವೇಂದ್ರ, ವೆಂಟರಮಣ ಟಿ ಹಾಜರಿದ್ದು ವಿನೂತನವಾಗಿ ಮೂಡಿಬಂದ ಗ್ರಾಮಸಭೆಯ ಯಶಸ್ಸಿಗೆ ಸಹಕರಿಸಿದರು. ಚೀಟಿಎತ್ತಿ ಅದೃಷ್ಟಶಾಲಿ ಮಹಿಳೆ ಮತ್ತು ವಿದ್ಯಾರ್ಥಿಯನ್ನು ಗುರುತಿಸಿ ಬಹುಮಾನ ನೀಡಲಾಯಿತು. ಅಭಿವೃದ್ಧಿ ಅಧಿಕಾರಿ ಗಣೇಶ ಹೆಬ್ಬಾರ್ ಭಾಗವಹಿಸಿದ ಎಲ್ಲರಿಗೆ ಕೃತಜ್ಞತೆ ಸಲ್ಲಿಸಿದರು.

Leave a Reply