ಮುಂಬಯಿ: ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಸಮಾಜ ಬಾಂಧವರ ಬಹಿರಂಗ ಅಧಿವೇಶನ, ವಿಶ್ವ ಬಂಟರ ಮಾಹಿತಿಕೋಶ, ಮಾಹಿತಿ ಸಂಗ್ರಹಕ್ಕೆ ಚಾಲನೆ, ಸಾಧಕರಿಗೆ ಸಮ್ಮಾನ, ವಿಕಲ ಚೇತನರಿಗೆ ಸಹಾಯಹಸ್ತ, ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಎ. 2 ರಂದು ಅಪರಾಹ್ನ 3 ಗಂಟೆಯಿಂದ ಮಂಗಳೂರು ಬಂಟ್ಸ್ ಹಾಸ್ಟೇಲ್ ಸಭಾಗೃಹದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮುಂಬಯಿ ಬಂಟರ ಸಂಘದ ಸಾಧಕರುಗಳಾದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರಿಗೆ ಸಮಾಜ ಸೇವೆಗಾಗಿ ಬೋಳ ಪರ್ತಿಮಾರ್ ಗುತ್ತು ಅಣ್ಣು ಶೆಟ್ಟಿ ಚಿನ್ನದ ಪದಕ ಹಾಗೂ ಮುಂಬಯಿಯ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರಿಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಮಾತೃ ಸಂಘದ ವತಿಯಿಂದ ಚಿನ್ನದ ಪದಕವನ್ನಿತ್ತು ಗಣ್ಯರು ಗೌರವಿಸಿದರು.
ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಜಯರಾಮ ಎ. ಶೆಟ್ಟಿ ಅವರಿಗೆ ಕೊಳ್ಕೆಬೈಲು ಮಹಾಬಲ ಶೆಟ್ಟಿ ಸ್ಮಾರಕ ಚಿನ್ನದ ಪದಕ ಹಾಗೂ ಉಳೂ¤ರು ಮೋಹನ್‌ದಾಸ್ ಶೆಟ್ಟಿ ಮತ್ತು ಸಾಂತೂರು ಜಯಶ್ರೀ ಎಂ. ಶೆಟ್ಟಿ ದಂಪತಿಯ ಪುತ್ರ ಸಿಎ ಸಚಿನ್ ಮೋಹನ್‌ದಾಸ್ ಶೆಟ್ಟಿ ಅವರು ಅಖೀಲ ಭಾರತ ಮಟ್ಟದಲ್ಲಿ ಸಿಎ 28 ನೇ ರ್‍ಯಾಂಕ್ ಪಡೆದಿದ್ದು ಅವರ ಸಾಧನೆಗಾಗಿ ಸಿಎ ನಿಶಾ ಶೆಟ್ಟಿ ಮಂಗಳೂರು ಸ್ಮರಣಾರ್ಥ ಚಿನ್ನದ ಪದಕವನ್ನು ಬಂಟರ ಸಂಘದ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು. ಥಾಣೆ ಆದಿಶಕ್ತಿ ಕನ್ನಡ ಸಂಘದ ಮಾಜಿ ಅಧ್ಯಕ್ಷ ಜಯರಾಮ್ ಜಿ. ಶೆಟ್ಟಿ ಅವರನ್ನು ಗಣ್ಯರು ಸಮ್ಮಾನಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ವಹಿಸಿದ್ದರು. ಬಹಿರಂಗ ಅಧಿವೇಶನವನ್ನು ಕರ್ನಾಟಕದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಓಂ ಪ್ರಕಾಶ್ ಐಪಿಎಸ್ ಉದ್ಘಾಟಿಸಿದರು. ಗೌರವ ಅತಿಥಿಗಳಾಗಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಬೋಂಬೇ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಶ್ಯಾಮ ಎನ್. ಶೆಟ್ಟಿ, ಆಳ್ವಾಸ್ ಎಜುಕೇಶನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಮೋಹನ್ ಆಳ್ವ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಡಾ| ನರೇಶ್ ಶೆಟ್ಟಿ, ಬಂಟರ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಮೇಘನಾಥ್ ಶೆಟ್ಟಿ, ಕೋಶಾಧಿಕಾರಿ ಸಿಎ ಕೆ. ಮನಮೋಹನ್ ಶೆಟ್ಟಿ, ಜತೆ ಕಾರ್ಯದರ್ಶಿ ಹೇಮನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಡಾ| ಆಶಾ ಜ್ಯೋತಿ ರೈ ಮಾಲಾಡಿ ಪ್ರತಿಭಾ ಪುರಸ್ಕಾರದ ಮಾಹಿತಿ ನೀಡಿದರು. ಸೋಮಶೇಖರ ಆಳ್ವ ವಂದಿಸಿದರು.















