ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಪ್ಪುಂದ: ಶಿಕ್ಷಣದ ಮೂಲಕ ಬದುಕಿನ ಬೆಳಕು ಪಡೆದ ಸಂಸ್ಥೆಗಳನ್ನು ಬೆಂಬಲಿಸಬೇಕಾದ ಹೊಣೆ ಹಳೆವಿದ್ಯಾರ್ಥಿಗಳಿಗೆ ಇದೆ. ಗುಣಮಟ್ಟದ ಶಿಕ್ಷಣ ನೀಡಲು ಸರಕಾರ ಎಷ್ಟೇ ಪ್ರಯತ್ನ ನಡೆಸಿದರೂ ಅದರಲ್ಲಿ ಸಾರ್ವಜನಿಕರು ಸಹಭಾಗಿತ್ವ ನೀಡದಿದ್ದರೆ ಆ ಪ್ರಯತ್ನ ಸಫಲವಾಗದು ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅಭಿಪ್ರಾಯಪಟ್ಟರು.
ಉಪ್ಪುಂದ ಜ್ಯೂನಿಯರ್ ಕಾಲೇಜಿನ ಹಳೆವಿದ್ಯಾರ್ಥಿಗಳ ಸಮ್ಮಿಲನ, ಅಭಿನಂದನಾ ಮತ್ತು ಕ್ರೀಡಾ ದತ್ತು ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಲವೆಡೆ ಹಳೆವಿದ್ಯಾರ್ಥಿ ಸಂಘ ಸೇರಿದಂತೆ ಸ್ಥಳೀಯ ಸಂಘಟನೆಗಳು ತಮ್ಮೂರಿನ ಶೈಕ್ಷಣಿಕ ಕೇಂದ್ರಗಳ ಅಭ್ಯುದಯಕ್ಕಾಗಿ ಯೋಜನೆ ರೂಪಿಸುತ್ತಿರುವುದು ಶ್ಲಾಘನೀಯ. ಈ ದಿಸೆಯಲ್ಲಿ ಹಳೆವಿದ್ಯಾರ್ಥಿ ಸಂಘವು ಶಾಲೆಯ ಪರಿಸರ ಹಾಗೂ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಯ ದೃಷ್ಟಿಯನ್ನಿಟ್ಟುಕೊಂಡು ಕೂಡಾ ಮುನ್ನಡೆಯಬೇಕಿದೆ. ಎಂದು ಸಲಹೆ ನೀಡಿದರು.
ಅಧ್ಯಕ್ಷತೆವಹಿಸಿದ್ದ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್‌ಚಂದ್ರ ಉಪ್ಪುಂದ ಮಾತನಾಡಿ, ಮನುಷ್ಯನ ಆಸೆಗಳಿಗೆ ಮಿತಿ ಇಲ್ಲ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದರೂ ಮಾನಸಿಕ ಶಾಂತಿ ದೊರೆಯುತ್ತಿಲ್ಲ. ದಾನ ಧರ್ಮ, ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಶಾಂತಿ ಪಡೆಯಲು ಸಾಧ್ಯವಿದೆ. ಕೆಲಸ ಕಾರ್ಯಗಳು ಸಮಾಜಮುಖಿಯಾಗಿ ಆಗಬೇಕು ಹಾಗೂ ಸಾಧನೆಗಳು ನಡೆಯುತ್ತಿರಬೇಕು. ಇಂತಹ ಕಾರ್ಯಗಳಿಗೆ ಒಗ್ಗಟ್ಟು ಅತಿಮುಖ್ಯ ಎಂದರು.
ರಾಷ್ಟ್ರ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸ್ಥಳೀಯ ಕಾಲೇಜಿನ ಅಕ್ಷತಾ ಮತ್ತು ಸುಬ್ರಹ್ಮಣ್ಯ ಇವರನ್ನು ಸನ್ಮಾನಿಸಲಾಯಿತು. ಜತೆಗೆ ಕ್ರೀಡಾಪಟು ಅಕ್ಷತಾರನ್ನು ಕ್ರೀಡಾದತ್ತು ಪಡೆಯಲಾಯಿತು. ನಿವೃತ್ತರಾದ ಶಿಕ್ಷಕ ಅಣ್ಣಪ್ಪ ಹೋಬಳಿದರರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾತ ವಿತರಿಸಲಾಯಿತು. ಪ್ರಾಂಶುಪಾಲ ಸೀತಾರಾಮ ಮಯ್ಯ, ಉಪಪ್ರಾಂಶುಪಾಲೆ ಜಾನಕಿ ನಾಯ್ಕ್, ಶ್ರೀಧರ ಐತಾಳ್, ವಿಶ್ವನಾಥ ಆಚಾರ್ಯ, ಗೌರಿ ದೇವಾಡಿಗ, ಗಣೇಶ್, ಮಂಜುನಾಥ ಬಿಜೂರು, ಜಗದೀಶ ದೇವಾಡಿಗ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಉಪ್ಪುಂದ ನಿರೂಪಿಸಿ, ಕಾರ್ಯದರ್ಶಿ ಸಂದೇಶ ಭಟ್ ವಂದಿಸಿದರು.