ಗಂಗೊಳ್ಳಿ ಎಸ್.ವಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ಅಭಿಮತ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕಲಿಕೆ ಎನ್ನುವುದು ನಿರಂತರ. ವಿದ್ಯಾರ್ಥಿ ಜೀವನವು ಪಠ್ಯಗಳ ಕಲಿಕೆಗಷ್ಟೇ ಸೀಮಿತವಾಗಿರದೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸಾಧನೆ ಮಾಡಲು ಉತ್ಸಾಹ, ಕಠಿಣ ಪರಿಶ್ರಮದ ಅಗತ್ಯತೆ ಇದೆ. ವಿದ್ಯಾರ್ಥಿ ಜೀವನದಲ್ಲಿ ಅನೇಕ ಕಷ್ಟಗಳು ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಿ ಜೀವನದಲ್ಲಿ ದೊರೆಯುವ ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಪ್ರತಿಯೊಂದು ಚಟುವಟಿಕೆಗಳಲ್ಲಿ ಸತತವಾಗಿ ಪಾಲ್ಗೊಂಡಾಗ ಮಾತ್ರ ನಮ್ಮ ಜೀವನದಲ್ಲಿ ಪರಿವರ್ತನೆ ಹೊಂದಲು ಸಾಧ್ಯವಿದೆ ಎಂದು ಮೂಡಬಿದಿರೆಯ ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಆಡಳಿತ ನಿರ್ದೇಶಕ ವಿವೇಕ ಆಳ್ವ ಹೇಳಿದರು.
ಅವರು ಗಂಗೊಳ್ಳಿಯ ಜಿಎಸ್‌ವಿಎಸ್ ಅಸೋಸಿಯೇಶನ್ ಪ್ರಾಯೋಜಿತ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಆಂಗ್ಲ ಮಾಧ್ಯಮ ಶಾಲೆಗಳ ಹಾವಳಿಯಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿದೆ ಎಂಬ ವಾದ ಸತ್ಯವಾದರೂ ಅನೇಕ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಾಲೆಗಳಿಗಿಂತ ಉತ್ತಮ ಶಿಕ್ಷಣ ನೀಡುತ್ತಿರುವುದರಿಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಉನ್ನತ ವ್ಯಾಸಾಂಗಕ್ಕೆ ಕನ್ನಡ ಮಾಧ್ಯಮ ಸಹಕಾರಿಯಾಗುತ್ತದೆಯೇ ಹೊರತು ಎಂದೂ ಅಡ್ಡಿಯಾಗುವುದಿಲ್ಲ ಎಂದು ಅವರು ಹೇಳಿದರು.
ಗಂಗೊಳ್ಳಿಯ ಸರಸ್ವತಿ ವಿದ್ಯಾಸಂಸ್ಥೆಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದ್ದು, ಶಾಲೆಯ ಆಡಳಿತ ಮಂಡಳಿ ಸ್ಪಂದಿಸುವ ರೀತಿ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಅವಿರತ ಶ್ರಮಿಸುತ್ತಿರುವುದು ಅಭಿನಂದನೀಯ. ಈ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಆಳ್ವಾಸ್ ಸಂಸ್ಥೆ ಮಾಡಲಿದ್ದು, ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಶಾಲೆಗೆ ಗಣಕಯಂತ್ರಗಳನ್ನು ನೀಡುವುದಾಗಿ ಅವರು ಹೇಳಿದರು.
ಜಿಎಸ್‌ವಿಎಸ್ ಅಸೋಸಿಯೇಶನ್‌ನ ಅಧ್ಯಕ್ಷ ಡಾ.ಕಾಶೀನಾಥ ಪೈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲೆಯ ಪ್ರಾಕ್ತನ ವಿದ್ಯಾರ್ಥಿ ಭಾವನಾ ರಾಘವೇಂದ್ರ ಹೆಗ್ಡೆ ಸ್ವಸ್ತಿವಾಚನಗೈದರು. ಇದೇ ಸಂದರ್ಭ ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಆಡಳಿತ ನಿರ್ದೇಶಕ ವಿವೇಕ ಆಳ್ವ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜಿಎಸ್‌ವಿಎಸ್ ಅಸೋಶಿಯೇಶನ್ ಕಾರ್ಯದರ್ಶಿ ಎಚ್.ಗಣೇಶ ಕಾಮತ್ ಶುಭ ಹಾರೈಸಿದರು. ಶಾಲೆಯ ಶಿಕ್ಷಕ ರಕ್ಷಕ ಸಮಿತಿಯ ಕಾರ್ಯದರ್ಶಿ ಬಿ.ಪ್ರಕಾಶ ಶೆಣೈ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನ ಆಡಳಿತ ನಿರ್ದೇಶಕ ವಿವೇಕ ಆಳ್ವ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಸುಮನಾ ಪಡಿಯಾರ್ ವರದಿ ವಾಚಿಸಿದರು. ರೇಣುಕಾ ನಾಯಕ್ ಸಂದೇಶ ವಾಚಿಸಿದರು. ಸಹಶಿಕ್ಷಕರಾದ ರೇಖಾ ಮತ್ತು ನಾರಾಯಣ ಉಪಾಧ್ಯಾಯ ಅತಿಥಿಗಳನ್ನು ಪರಿಚಯಿಸಿದರು. ಸಹಶಿಕ್ಷಕರಾದ ಎನ್.ಸುಭಾಶ್ಚಂದ್ರ ನಾಯಕ್, ವಿಶ್ವನಾಥ ಭಟ್ ಮತ್ತು ಸ್ವಾತಿ ಮಡಿವಾಳ ಅತಿಥಿಗಳನ್ನು ಗೌರವಿಸಿದರು. ಸಹಶಿಕ್ಷಕಿ ಮಾಲಾಶ್ರೀ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ನಾರಾಯಣ ಶೆಟ್ಟಿ ವಂದಿಸಿದರು.