ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೈಹಿಕ ಮಾನಸಿಕ ತೊಂದರೆಗಳಾದಾಗ ಯಾವಾಗಲೂ ದೇಹದ ಒಳಕ್ಕೆ ರಾಸಾಯನಿಕ ಔಷಧ ಸೇವಿಸುವುದನ್ನು ಕನಿಷ್ಠಗೊಳಿಸಿ ದೇಸೀ ಚಿಕಿತ್ಸೆಗಳಾದ ಯೋಗ, ಪ್ರಾಣಾಯಾಮ, ಅಕ್ಯುಪ್ರೆಶರ್ ಮುದ್ರೆ ವಿಜ್ಞಾನ, ಆಯಸ್ಕಾಂತ, ಆರ್ಯುವೇದ ಚಿಕಿತ್ಸೆಗಳನ್ನು ಬಳಸುವುದರಿಂದ ಬಹಳಷ್ಟು ಗುಣಪಡೆದು ಸರಳ, ಸುಲಭ ಮತ್ತು ಸಹಜತೆಯಿಂದ ಬಾಳಬಹುದು ಎಂದು ಸಾಹಿತಿ ಯು ವರಮಹಾಲಕ್ಷ್ಮೀ ಹೊಳ್ಳ ನುಡಿದರು.
ಅವರು ಉಪ್ಪುಂದ ಶಂಕರ ಕಲಾ ಮಂದಿರದ ಸಮೃದ್ಧ ಸಭಾ ಭವನದಲ್ಲಿ ಹೊಳ್ಳರ ದತ್ತಿನಿಧಿ, ಸುವಿಚಾರ ಬಳಗ ಮತ್ತು ಮಹಿಳಾ ವಿವಿದೊದ್ದದೇಶ ಸಹಕಾರ ಸಂಘದ ಜಂಟಿ ಆಶ್ರಯದಲ್ಲಿ ಜನವರಿ ೨ ರಿಂದ ೮ ರ ತನಕ ಆಯೋಜಿಸಿದ ಶಿಬಿರದಲ್ಲಿ ರಾಜಸ್ಥಾನದ ಡಾ ರಾಮ ಮನೋಹರ ಲೋಹಿಯಾ ಆರೋಗ್ಯ ಜೀವನ್ ಸಂಸ್ಕಾರದ, ಡಾ|| ಭೂಪೇಂದ್ರ ಚೌಧರಿ ಮತ್ತು ತಂಡದ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಡಾ ಭೂಪೇಂದ್ರ ಚೌಧರಿಯವರು ಅಂಗೈ, ಅಂಗಾಲು, ಬೆನ್ನುಹುರಿ, ಸೊಂಟ ಮುಂತಾದೆಡೆ ಹರಿಯುವ ನರಮಂಡಲಗಳನ್ನು ಪ್ರಚೋದಿಸಿ ಸಶಕ್ತಗೊಳಿಸುವುದರಿಂದ ಉದ್ಯೋಗ ಮತ್ತು ಆಹಾರ ನಿಮಿತ್ತ ಬರುವ ಹಲವಾರು ಕಾಯಿಲೆಗಳನ್ನು ಯಶಸ್ವಿಯಾಗಿ ಗುಣಪಡಿಸುವುದರ ಬಗ್ಗೆ ವಿವರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಹೊಳ್ಳರ ದತ್ತಿನಿಧಿಯ ಅಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ವಹಿಸಿದ್ದರು. ಸುವಿಚಾರ ವೇದಿಕೆಯ ಸಂಚಾಲಕ ವಿ.ಹೆಚ್. ನಾಯಕ್ ಸ್ವಾಗತಿಸಿದರು, ಮಹಿಳಾ ವಿವಿದೊದ್ದೇಶ ಸಹಕಾರಿ ಸಂಘದ ಕಾರ್ಯದರ್ಶಿ ಯು. ಗಣೇಶ ಪ್ರಸನ್ನ ಮಯ್ಯ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.