ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗ್ರಾಮೀಣ ಪ್ರದೇಶವಾದ ಬೈಂದೂರಿನಲ್ಲಿ ಹವ್ಯಾಸಿ ಕಲಾವಿದರ ಕೂಡುವಿಕೆಯಿಂದ ಆರಂಭಗೊಂಡ ಲಾವಣ್ಯ ಬೈಂದೂರು ಕಲಾ ಸಂಸ್ಥೆಯ 40ನೇ ವರ್ಷದ ಸಂಭ್ರಮದಲ್ಲಿದ್ದು, ಜನವರಿ 27ರಿಂದ ಫೆಬ್ರವರಿ 5ರ ವರೆಗೆ ರಂಗ ಲಾವಣ್ಯ 2017 – ಕಲಾಮಹೋತ್ಸವ ಹತ್ತು ದಿನಗಳ ಕಾರ್ಯಕ್ರಮ ಬೈಂದೂರಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ.
ಬೈಂದೂರಿನ ಲಾವಣ್ಯ ರಂಗಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಲಾವಣ್ಯ ಬೈಂದೂರು ಅಧ್ಯಕ್ಷ ಗಿರೀಶ್ ಬೈಂದೂರು ಮಾಹಿತಿ ನೀಡಿದರು.
ಲಾವಣ್ಯ ಸಂಸ್ಥೆಯಲ್ಲಿ ಈವರೆಗೆ 80ಕ್ಕೂ ಅಧಿಕ ನಾಟಕ ರಚನೆಗೊಂಡು 800ಕ್ಕೂ ಅಧಿಕ ಪ್ರದರ್ಶನ ಕಂಡಿದೆ. ಖ್ಯಾತ ರಂಗ ನಿರ್ದೇಶಕರಾದ ಸೀತಾರಾಮ್ ಶೆಟ್ಟಿ ಕೂರಾಡಿ, ಸುರೇಶ್ ಆನಗಳ್ಳಿ, ರಾಜೇಂದ್ರ ಕಾರಂತ ಸೇರಿದಂತೆ ಹಲವು ಖ್ಯಾತನಾಮರಿಂದ ನಾಟಕ ನಿರ್ದೇಶನ, ರಾಜ್ಯ ಮಟ್ಟದ 23 ನಾಟಕ ಸ್ವರ್ಧೆಗಳಲ್ಲಿ ಭಾಗವಹಿಸಿ 125ಕ್ಕೂ ಹೆಚ್ಚು ಬಹುಮಾನ, ಹಲವು ನಾಟಕೋತ್ಸವ, ನಾಟಕ ಸ್ವರ್ಧೆ, ಮಕ್ಕಳ ನಾಟಕ ಪ್ರಸ್ತುತಿ, ರಂಗ ತರಬೇತಿ ಮುಂತಾದವುಗಳೊಂದಿಗೆ ಸಾಮಾಜಿಕ ಕಾರ್ಯದಲ್ಲಿಯೂ ಸಂಸ್ಥೆ ತೊಡಗಿಕೊಂಡಿದ್ದು ಬೈಂದೂರಿನ ಸಾಂಸ್ಕೃತಿಕ ರಂಗದಲ್ಲಿ ತನ್ನದೇ ದೊಡ್ಡ ಹೆಸರು ಮಾಡಿದೆ ಎಂದರು.
40ನೇ ವರ್ಷದ ನೆನಪಿಗಾಗಿ ಲಾವಣ್ಯ ರಂಗಮನೆಯ ಮೇಲಂತಸ್ತನ್ನು ರಚಿಸಲು ನಿರ್ಧರಿಸಲಾಗಿದ್ದು, 25 ಲಕ್ಷ ರೂ ವೆಚ್ಚದ ಯೋಜನೆಯನ್ನು ಅಂದಾಜಿಸಲಾಗಿದ್ದು ಕಲಾ ಮಹೋತ್ಸವ ಹಾಗೂ ಮೇಲಂತಸ್ತು ನಿರ್ಮಾಣಕ್ಕೆ ಕಲಾಭಿಮಾನಿಗಳ ನೆರವು ಅಗತ್ಯವಿದೆ ಎಂದು ವಿನಂತಿಸಿಕೊಂಡರು.
ರಂಗ ಲಾವಣ್ಯ 2017 – ಕಲಾಮಹೋತ್ಸವ
ಜನವರಿ 27ರಿಂದ ಫೆಬ್ರವರಿ 5ರ ವರೆಗೆ ಬೈಂದೂರಿನ ಶಾರದಾ ವೇದಿಕೆಯಲ್ಲಿ ಪ್ರತಿದಿನ ಸಂಜೆ 7ಕ್ಕೆ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.
- ಜನವರಿ 27 ಶುಕ್ರವಾರ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಮೂಡುಬಿದಿರೆ ಪ್ರಸ್ತುತಿಯ ಡಾ. ಚಂದ್ರಶೇಖರ ಕಂಬಾರ್ ರಚನೆ, ಜೀವನರಾಂ ಸುಳ್ಯ ನಿರ್ದೇಶನದ ನಾಟಕ ಮಹಾಮಾಯಿ,
- ಜನವರಿ 28 ಶನಿವಾರ ನಮ್ ತುಳುವೆರ್ ಕಲಾ ಸಂಘಟನೆ ಮುದ್ರಾಡಿ ಪ್ರಸ್ತುತಿಯ, ಚಿ. ಶ್ರೀನಿವಾಸ ರಾಜು ರಚನೆ, ಸುಕುಮಾರ ಮೋಹನ್ ನಿರ್ದೇಶನದ ನಾಟಕ ಹಳಿಯ ಮೇಲಿನ ಸದ್ದು
- ಜನವರಿ 29 ಆದಿತ್ಯವಾರ ಡ್ರಾಮಾಟ್ರಿಕ್ಸ್ ಬೆಂಗಳೂರು ಪ್ರಸ್ತುತಿಯ, ಎನ್. ಸಿ. ಮಹೇಶ್ ರಚನೆ, ರಾಜೇಂದ್ರ ಕಾರಂತ್ ನಿರ್ದೇಶನದ ನಾಟಕ ಬೀಚ್ ಹೌಸ್
- ಜನವರಿ 30 ಸೋಮವಾರ ಯಾಜಿ ಯಕ್ಷ ಮಿತ್ರ ಮಂಡಳಿ ಕುಮಟಾ ಇವರಿಂದ ಯಕ್ಷಗಾನ ಮಹಾಮಂತ್ರಿ ದುಷ್ಟಬುದ್ಧಿ
- ಜನವರಿ 31 ಮಂಗಳವಾರ ರಮೇಶ್ಚಂದ್ರ ಬೆಂಗಳೂರು ಹಾಗೂ ಸಂಗೀತ ಬಾಲಚಂದ್ರ ತಂಡದವರಿಂದ ಗಾನ ಮಾಧುರ್ಯ – ಇನಿ ದನಿ
- ಫೆಬ್ರವರಿ 01 ಬುಧವಾರ ಲಾವಣ್ಯ ರಿ. ಬೈಂದೂರು ಪ್ರಸ್ತುತಿಯ, ರಾಜೇಂದ್ರ ಕಾರಂತ್ ರಚನೆ, ಗಿರೀಶ್ ಬೈಂದೂರು ನಿರ್ದೇಶನದ ನಾಟಕ ಮುದ್ದಣ್ಣನ ಪ್ರಮೋಷನ್ ಪ್ರಸಂಗ
- ಫೆಬ್ರವರಿ 02 ಗುರುವಾರ ದೃಶ್ಯ ಕಾವ್ಯ ಬೆಂಗಳೂರು ಪ್ರಸ್ತುತಿಯ, ಸುರೇಂದ್ರ ವರ್ಮ ರಚಿಸಿ ಸಿದ್ಧಲಿಂಗ ಪಟ್ಟಣ ಶೆಟ್ಟಿ ಅನುವಾದಿಸಿ ನಂಜುಂಡೇಗೌಡ ಸಿ. ನಿರ್ದೇಶಿಸಿದ ನಾಟಕ ಸೂರ್ಯಾಸ್ತದಿಂದ ಸೂರ್ಯೋದಯದ ವರೆಗೆ
- ಫೆಬ್ರವರಿ 03 ಶುಕ್ರವಾರ ಗಂಗಾವತಿ ಪ್ರಾಣೇಶ್ ಹಾಗೂ ತಂಡದಿಂದ ನಗೆಹಬ್ಬ
- ಫೆಬ್ರವರಿ 04 ಶನಿವಾರ ರಂಗಾಯಣ ಮೈಸೂರು ಪ್ರಸ್ತುತಿಯ ನಾಟಕ ಸುರೇಶ್ ಆನಗಳ್ಳಿ ರಚಿಸಿ, ನಿರ್ದೇಶಿಸಿದ ಚಿತ್ರಲೇಖ
- ಫೆಬ್ರವರಿ 05 ಭಾನುವಾರ ರಂಗಮಂಟಪ ಬೆಂಗಳೂರು ಪ್ರಸ್ತುತಿಯ, ವೈದೇಹಿ ರಚನೆ, ಚಂಪಾ ಶೆಟ್ಟಿ ನಿರ್ದೇಶನದ ನಾಟಕ ಅಕ್ಕು
ಪತ್ರಿಕಾಗೋಷ್ಠಿಯಲ್ಲಿ ಲಾವಣ್ಯ ಬೈಂದೂರು ಉತ್ಸವ ಸಮಿತಿ ಅಧ್ಯಕ್ಷ ಸದಾಶಿವ ಡಿ. ಪಡುವರಿ, ಕಾರ್ಯದರ್ಶಿ ನಾರಾಯಣ ಕೆ. ಕಾರ್ಯಕಾರಿ ಸಮಿತಿ ಗೌರವಾಧ್ಯಕ್ಷ ಯು. ಶ್ರೀನಿವಾಸ ಪ್ರಭು, ಪ್ರಧಾನ ಕಾರ್ಯದರ್ಶಿ ಬಿ. ಮೋಹನ ಕಾರಂತ್, ವ್ಯವಸ್ಥಾಪಕರಾದ ಬಿ. ಗಣೇಶ್ ಕಾರಂತ್, ಬಿ. ರಾಮ ಟೈಲರ್ ಮೊದಲಾದವರು ಉಪಸ್ಥಿತರಿದ್ದರು.