ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಸಂವೇದನಾ ಟ್ರಸ್ಟ್ ರಿ. ನಾಯ್ಕನಕಟ್ಟೆ, ಕನ್ನಡ ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ವಿಶೇಷ ಘಟಕ ಯೋಜನೆ ಪ್ರಾಯೋಜಿತ ಸುಗಮ ಸಂಗೀತ ಕಾರ್ಯಕ್ರಮ ಯುವ ಕಲಾವಿದ ಪ್ರಕಾಶ್ ಮತ್ತು ತಂಡ ಸಮೃದ್ಧಿ ಕಲಾಬಳಗ ಕುಂದಾಪುರ ಇವರಿಂದ ವಡೇರಹೋಬಳಿಯ ಪಿವಿಎಸ್ ಸರೋಜಿನಿ ಮಧುಸೂದನ ಕುಶೆ ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿತು.
ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲೆಮರೆಯ ಕಾಯಿಯಂತಿದ್ದ ಪ್ರತಿಭಾವಂತರನ್ನು ಮುಖ್ಯವಾಹಿನಿಯಲ್ಲಿ ಗುರುತಿಸುವಂತೆ ಮಾಡುವುದು ಅಗತ್ಯ. ಸೂಕ್ತ ಅವಕಾಶಗಳನ್ನು ಬಳಸಿಕೊಂಡಾಗ ಕಲಾವಿದರು ಬೆಳೆಯಲು ಸಾಧ್ಯ. ಸ್ಥಳೀಯ ಕಲಾವಿದರ ಕಲಾಪ್ರತಿಭೆಗಳು ಹೆಚ್ಚು ಅನಾವರಣಗೊಳ್ಳುವ ನಿಟ್ಟಿನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ರೂಪಿಸಿದ ಕಾರ್ಯಕ್ರಮಗಳು ಸಾಕಷ್ಟು ಸಹಕಾರಿಯಾಗಿವೆ ಎಂದರು.
ಶಾಲಾ ಮುಖ್ಯಶಿಕ್ಷಕ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಶುಭಹಾರೈಸಿದರು. ಶಾಲಾ ಸಹಶಿಕ್ಷಕರು ಉಪಸ್ಥಿತರಿದ್ದರು. ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ಬಿಂಬಿಸುವ ಭಕ್ತಿ-ಭಾವಗೀತೆ, ಕನ್ನಡಗೀತೆ ಹಾಗೂ ಜಾನಪದಗೀತೆಗಳನ್ನು ಪ್ರಸ್ತುತಪಡಿಸಲಾಯಿತು. ಪಕ್ಕವಾದ್ಯ ಕಲಾವಿದರಾಗಿ ಕೃಷ್ಣ ಕಾಮತ್ ಹಾಲಾಡಿ ಕೀಬೋರ್ಡ್‌ನಲ್ಲಿ ಮತ್ತು ಸುರೇಶ್ ಆಚಾರ್ ಮಣೂರು ತಬಲಾದಲ್ಲಿ ಸಹಕರಿಸಿದರು.
ಕಲಾವಿದ ಪ್ರಕಾಶ್ ಪ್ರಾರ್ಥಿಸಿದರು. ಪತ್ರಕರ್ತ, ಆಕಾಶವಾಣಿ ಕಲಾವಿದ ಚಂದ್ರ ಕೆ. ಹೆಮ್ಮಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು. ಮುಕ್ತಾ ಟಿವಿ ನಿರೂಪಕಿ ಅಕ್ಷತಾ ಗಿರೀಶ್ ಸಹಕರಿಸಿದರು. ಸಹಶಿಕ್ಷಕ ಮಂಜುನಾಥ ಹೆಬ್ಬಾರ್ ವಂದಿಸಿದರು.










