ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಐವತ್ತಕ್ಕೂ ಹೆಚ್ಚು ಯಕ್ಷಗಾನದ ವೃತ್ತಿ ಮೇಳಗಳು, ಹತ್ತು ಹಲವು ಸಂಘ-ಸಂಸ್ಥೆಗಳು ದಿನಂಪ್ರತಿ ನೂರಾರು ಯಕ್ಷಗಾನ ಪ್ರದರ್ಶನಗಳು, ಸಾವಿರಾರು ಪ್ರೇಕ್ಷಕರು ನಿತ್ಯ ಸಾಂಸ್ಕೃತಿಕ ಸಮಾರಾಧನೆ ನಡೆಯುವ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ನಿಜಾರ್ಥದಲ್ಲಿ ಸಾಂಸ್ಕೃತಿಕ ರಾಜಧಾನಿಯಾಗಿದೆ. ಯಕ್ಷಗಾನದ ಮೂಲ ಸ್ವರೂಪ ಬದಲಾಗುತ್ತಿರುವ ಈ ಹೊತ್ತಿನಲ್ಲಿ ಯಕ್ಷಾಂತರಂಗವನ್ನು ಪರಿಚಯಿಸಿ ಕೊಡುವ ಈ ಪ್ರಾತ್ಯಕ್ಷಿಕೆ ಹೊಸ ಪ್ರೇಕ್ಷಕರನ್ನು ಸೆಳೆಯುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಯಕ್ಷದೇಗುಲ ಸಂಸ್ಥೆಯ ಪ್ರಯತ್ನ ಶ್ಲಾಘನೀಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
ಅವರು ಎಡಬೆಟ್ಟಿನ ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಕಾರದಿಂದ ೫ ದಿನ ಯಕ್ಷಗಾನ ಪ್ರಾತ್ಯಕ್ಷಿಕೆಯನ್ನು ಯಕ್ಷಗಾನ ದಿವಟಿಕೆಗೆ ದೀಪ ಹಚ್ಚುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಗಾಯನ, ವಾದನ, ನರ್ತನ, ಮಾತು ಮತ್ತು ಆಕರ್ಷಕ ವೇಷ ಭೂಷಣಗಳೆಂಬ ಪಂಚಾಗದ ಮೇಲೆ ನಿಂತಿರುವ ಭವ್ಯ ಸೌಧದಂತಿರುವ ಯಕ್ಷಗಾನ ಕಲೆಯ ಶಾಸ್ತ್ರೀಯ ಅಧ್ಯಯನವನ್ನು ಮಾಡಿ ಆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಈ ಪ್ರಾತ್ಯಕ್ಷಿಕೆ ಅತ್ಯಂತ ಉಪಯುಕ್ತ, ಈ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಆಯೋಜಿಸುತ್ತಿರುವುದು ಸಂತೋಷದ ವಿಚಾರ ಎಂದು ಯುವ ಪ್ರಸಂಗ ಕರ್ತ, ಯಕ್ಷಗುರು ಪ್ರಸಾದ್ ಮೊಗಬೆಟ್ಟು ಹೇಳಿದರು. ವೇದಿಕೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ವಾಕುಡ, ಯಕ್ಷದೇಗುಲದ ವ್ಯವಸ್ಥಾಪಕ ಕೋಟ ಸುದರ್ಶನ ಉರಾಳ ಮತ್ತು ಕೇಸರಿ ಯುವಜನ ಸಂಘದ ಅಧ್ಯಕ್ಷ ಕೃಷ್ಣಪೂಜಾರಿ ಉಪಸ್ಥಿತರಿದ್ದರು. ಇದೇ ಸಂದರ್ಭ ಕೇಸರಿಯುವ ಜನ ಸಂಘದ ಯಕ್ಷಗುರುಗಳಾದ ಸುದರ್ಶನ ಉರಾಳ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಲಂಬೋದರ ಹೆಗಡೆ ಸ್ವಾಗತಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿದರು. ಯಕ್ಷದೇಗುಲದ ವ್ಯವಸ್ಥಾಪಕ ಕೋಟ ಸುದರ್ಶನ ಉರಾಳ ವಂದಿಸಿದರು. ಕಾರ್ಯಕ್ರಮಕ್ಕೆ ಕೇಸರಿ ಯುವ ಜನ ಸಂಘ ಸಹಕಾರ ನೀಡಿತ್ತು. ಕೆ. ಮೋಹನ್ ನಿರ್ದೇಶನದಲ್ಲಿ, ಕಲಾವಿದ ವಿದ್ವಾಂಸರಾದ ಸುಜಯೀಂದ್ರ ಹಂದೆಯವರ ಸಮರ್ಥ ನಿರೂಪಣೆಯೊಂದಿಗೆ ಧಿರ ವಯ್ಯಾರೋ ಬಹುಪರಾಕ್, ಶರಧಿ ಗಂಭಿರೋ ಬಹುಪರಾಕ್, ಕಸ್ತೂರಿ ಕೋಲಾಹಲೋ ಸ್ವಾಮಿ ಪರಾಕ್, ಸ್ವಾಮಿ ಪರಾಕ್, ಭೂಮಿ ಪರಾಕ್, ದೇವ ಪರಾಕ್, ಸ್ವಾಮಿ ಪರಾಕ್ ಎಂದು ಕೋಡಂಗಿ ನೃತ್ಯಗಾರರು ಚೌಕಿಯಲ್ಲಿ ಗಣಪತಿ ಪೂಜೆ ಮುಗಿಸಿ ದಿವಟಿಕೆ ಹಿಡಿದು ಭಾಗವತರು, ಚಂಡೆ, ಮದ್ದಲೆಯೊಂದಿಗೆ ಬಹುಪರಾಕ್ ಹಾಕುತ್ತಾ ರಂಗಕ್ಕೆ ಬಂದು ಗಜವದನನನ್ನು ಧ್ಯಾನಿಸಿದರು. ಹೀಗೆ ನಿರೂಪಣೆಯೊಂದಿಗೆ ಕೋಡಂಗಿ, ಬಾಲಗೋಪಾಲ, ಪದಾಭಿನಯ, ಮುದ್ರೆಗಳ ಪರಿಚಯ, ಯುದ್ಧ ಕುಣಿತ, ಅಟ್ಟೆ ಕ್ಯಾದಿಗೆ ಮುಂದಲೆ ಕಟ್ಟುವ ಕ್ರಮ, ಗಂಡು ಬಣ್ಣದ ಚಿಟ್ಟೆ ಇಡುವ ಕ್ರಮ, ವಸ್ತ್ರಾಲಂಕಾರ ಮಾಡುವುದು. ಹಾಗೆ ಪೌರಾಣಿಕ ಪ್ರಸಂಗಗಳ ಸ್ವಾರಸ್ಯ ಸನ್ನಿವೇಷಗಳ ಪ್ರಸ್ತುತಿ ಮಾಡಿಕೊಟ್ಟರು.
ಕೋಟ ಸುದರ್ಶನ ಉರಾಳರ ಸಂಯೋಜನೆಯಲ್ಲಿ ಕಲಾವಿದರಾಗಿ ಲಂಬೋದರ ಹೆಗಡೆ, ದೇವರಾಜ್‌ದಾಸ್, ಗಣಪತಿ ಭಟ್, ಮಾಧವ ಮಣೂರು, ತಮ್ಮಣ್ಣ ಗಾಂವ್ಕರ್, ಕೃಷ್ಣಮೂರ್ತಿ ಉರಾಳ್, ನವೀನ್ ಕೋಟ, ನರಸಿಂಹ ತುಂಗ, ಉಪ್ಪುಂದ ಗಣೇಶ, ಕಡ್ಲೆ ಗಣಪತಿ ಹೆಗಡೆ, ಉದಯ ಬೋವಿ, ರಾಜು ಪೂಜಾರಿ ಮತ್ತು ರಾಘವೇಂದ್ರ ತುಂಗರು ಭಾಗವಹಿಸಿದರು.