ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉತ್ತಮ ಶಿಕ್ಷಣವನ್ನು ಪಡೆಯುವಲ್ಲಿ ಇಂದು ಯಾವ ಪ್ರದೇಶವೂ ಹಿಂದೆ ಬಿದ್ದಿಲ್ಲ. ಆದರೆ ಶಿಕ್ಷಣದೊಂದಿಗೆ ಉತ್ತಮ ಮನಸ್ಸನ್ನು ಕಟ್ಟುವ ಕಟ್ಟುವ ಕೆಲಸವಾಗಬೇಕು. ನಾಟದಿಂದ ಜಾಗೃತಿ, ಸಂಸ್ಕಾರ, ಸೌಂದರ್ಯಪ್ರಜ್ಞೆ ಹಾಗೂ ಮನಸ್ಸನ್ನು ಕಟ್ಟುವ ಕೆಲಸವಾಗುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಹೇಳಿದರು.
ಅವರು ಲಾವಣ್ಯ ರಿ. ಬೈಂದೂರು ೪೦ನೇ ವರ್ಷದ ಸಂಭ್ರಮದಲ್ಲಿ ಆಯೋಜಿಸಿದ ರಂಗ ಲಾವಣ್ಯ – ಕಲಾಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಸೌಂದರ್ಯಪ್ರಜ್ಞೆ ಇರುವವರು ದೇಶ, ಪರಿಸರ, ಕಲೆ ಹಾಗೂ ಕಲಾವಿದರನ್ನು ಪ್ರೀತಿಸುತ್ತಾರೆ. ಸಂಸ್ಕಾರ ಹಾಗೂ ಸಮಾಜದ ಪರಿಕಲ್ಪನೆ ಇರುವ ವ್ಯಕ್ತಿಯಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಅಂತಹ ಪ್ರೀತಿ ಹಾಗೂ ವ್ಯಕ್ತಿತ್ವನ್ನು ಒಳಗೊಂಡರೇ ಮಾತ್ರ ಸಮಾಜದಲ್ಲಿಯೂ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದರು.
ಡಾ. ಎ.ವಿ ಬಾಳಿಗ ಸ್ಮಾರಕ ಆಸ್ವತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ.ವಿ ಭಂಡಾರಿ ಶುಭಶಂಸನೆಗೈದು, ನಾಟಕಗಳು ಮಕ್ಕಳ ಮನಪರಿವರ್ತನೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನಮ್ಮೊಳಗಿನ ಒತ್ತಡವನ್ನೂ ನಿವಾರಿಸುತ್ತದೆ. ಮಾನಸಿಕ ಸಮಸ್ಯೆ ಇರುವವರನ್ನು ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸರಿಹೋಗುವ ಸಂದರ್ಭಗಳು ಇವೆ ಎಂದರು.
ರಂಗ ಲಾವಣ್ಯ ಉತ್ಸವ ಸಮಿತಿ ಗೌರವಾಧ್ಯಕ್ಷ, ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲಾವಣ್ಯ ಗೌರವಾಧ್ಯಕ್ಷ ಯು ಶ್ರೀನಿವಾಸ ಪ್ರಭು ಉಪಸ್ಥಿತರಿದ್ದರು. ಲಾವಣ್ಯ ಉತ್ಸವ ಸಮಿತಿ ಕಾರ್ಯದರ್ಶಿ ನಾರಾಯಣ, ಲಾವಣ್ಯದ ಕಲಾವಿದರಾದ ಸತ್ಯಾತ್ಮ ಜೋಷಿ, ಗೋಪಾಲಕೃಷ್ಣ ಜೋಷಿ, ರಾಜಶೇಖರ ದೇವಾಡಿಗ, ರವೀಂದ್ರ ಬಳೆಗಾರ್, ಉದಯ ಪಡಿಯಾರ್ ಅವರನ್ನು ಸನ್ಮಾನಿಸಲಾಯಿತು. ಡಾ. ಮೋಹನ್ ಆಳ್ವ ಅವರನ್ನು ಗೌರವಿಸಲಾಯಿತು.
ಉದ್ಘಾಟನೆಯ ಬಳಿಕ ಲಾವಣ್ಯ ಸದಸ್ಯರು ವೇದಿಕೆಯ ಮುಂಭಾಗದಲ್ಲಿ ಸಾಲು ಹಣತೆಯನ್ನಿಟ್ಟು ದೀಪ ಬೆಳಗಿದರು. ಸಾರ್ವಜನಿಕರು ಬಲೂನು ಹಾರಿ ಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲಾವಣ್ಯ ಬೈಂದೂರು ಅಧ್ಯಕ್ಷ ಗಿರೀಶ್ ಬೈಂದೂರು ಪ್ತಾಸ್ತಾವಿಕ ಮಾತುಗಳನ್ನಾಡಿದರು. ಲಾವಣ್ಯ ಉತ್ಸವ ಸಮಿತಿ ಅಧ್ಯಕ್ಷ ಸದಾಶಿವ ಡಿ. ಪಡುವರಿ ಸ್ವಾಗತಿಸಿದರು. ಲಾವಣ್ಯದ ಪ್ರಧಾನ ಕಾರ್ಯದರ್ಶಿ ಮೋಹನ ಕಾರಂತ್ ವಂದಿಸಿದರು. ಸದಸ್ಯ, ವಾಗ್ಮಿ ಓಂಗಣೇಶ್ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.