ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ತಾಲೂಕು 15ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಫೆ. 23ರಂದು ಕಿರಿಮಂಜೇಶ್ವರದಲ್ಲಿ ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಪತ್ರಕರ್ತ, ಅಂಕಣಕಾರ, ಸಾಹಿತಿ ಸತೀಶ ಚಪ್ಪರಿಕೆ ಆಯ್ಕೆಯಾಗಿದ್ದಾರೆ.
ಮೂಲತ: ಕುಂದಾಪುರ ತಾಲೂಕಿನ ಕಾಲ್ತೋಡು ಗ್ರಾಮದ ಚಪ್ಪರಿಕೆ ಎನ್ನುವ ಅತ್ಯಂತ ಗ್ರಾಮೀಣ ಪ್ರದೇಶದವರಾದರೂ ಪ್ರಸ್ತುತ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಪತ್ರಕರ್ತರಾಗಿದ್ದಾರೆ. ಪದವಿಪೂರ್ವ ಶಿಕ್ಷಣದ ವರೆಗೆ ತಾಲೂಕಿನಲ್ಲೇ ಓದಿ ಅನಂತರ ಬೆಂಗಳೂರು ವಿವಿ.ಯಲ್ಲಿ ಬಿ.ಎಸ್ಸಿ. ಪದವಿ ಪಡೆದು ಅಣ್ಣಾಮಲೈ ವಿ.ವಿ.ಯಲ್ಲಿ ಸಸ್ಯಶಾಸ್ತ್ರದಲ್ಲಿ ಎಂ.ಎಸ್ಸಿ. ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿರುತ್ತಾರೆ. ಲಂಡನ್‌ನ ವೆಸ್ಟ್‌ಮಿನಿಸ್ಟರ್ ವಿ.ವಿ.ಯಲ್ಲಿಯೂ ಅಧ್ಯಯನ ಮಾಡಿರುವ ಹೆಗ್ಗಳಿಕೆ ಇವರದ್ದು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಬ್ರಿಟಿಷ್ ಚೆವೆನ್ನಿಂಗ್ ಸ್ಕಾಲರ್ ಆಗಿರುವ ಸತೀಶರವರು ಸುಮಾರು 25 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಹಾಗೂ ಪ್ರಜಾವಾಣಿಯಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಚಪ್ಪರಿಕೆಯವರು ಹಲವು ವರ್ಷಗಳ ಕಾಲ ಕ್ರೀಡಾ ವರದಿಗಾರರಾಗಿ ದುಡಿದಿದ್ದಾರೆ. ದಿ ಸಂಡೆ ಇಂಡಿಯನ್ – ಕನ್ನಡ ಪತ್ರಿಕೆಯ ಹಿರಿಯ ಸಂಪಾದಕರಾಗಿ, ವಿಆರ್‌ಎಲ್ ಮೀಡಿಯಾ ಲಿ.ನ ಮುಖ್ಯ ಸಂಪಾದಕರಾಗಿಯೂ ಕೆಲಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನ ಸಿಂಬಯಾಸಿಸ್ ಇನ್‌ಸ್ಟಿಟ್ಯೂಟ್ ಆಫ್ ಮಿಡಿಯಾ ಮತ್ತು ಕಮ್ಯೂನಿಕೇಷನ್‌ನಲ್ಲಿ ಅಸಿಸ್ಟೆಂಟ್ ಪ್ರೋಫೆಸರ್ ಆಗಿಯೂ, ಬೆಂಗಳೂರಿನ ಸಿಟಿ ಮಿಡಿಯಾದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವೆರ‍್ಬಿಂದೆನ್ ಕಮ್ಯೂನಿಕೇಶನ್ ಪ್ರೈ.ಲಿ.ನ ಆಡಳಿತ ನಿರ್ದೇಶಕರಾಗಿದ್ದಾರೆ.
ತಮ್ಮ ವೃತ್ತಿ ಜೀವನದಲ್ಲಿ ಗಣ್ಯಾತಿಗಣ್ಯರನೇಕರನ್ನು ಸಂದರ್ಶನ ಮಾಡಿರುವ ಸತೀಶ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ‘ಮಾತೊಂದು ಮೌನ ಕಣಿವೆ’, ‘ಹಸಿರು ಹಾದಿ’, ‘ವಿಶ್ವಕಪ್ ಕ್ರಿಕೆಟ್’, ‘ಬೇರು’, ‘ಥೇಮ್ಸ್ ತಟದ ತವಕ ತಲ್ಲಣ’, ‘ದೇವಕ್ರು’, ‘ಗರ್ಭ’, ‘ಎಡಮಾವಿನ ಹೊಳೆಯ ದಡದಲ್ಲಿ’ ಮುಂತಾದುವು ಇವರ ಪ್ರಕಟಿತ ಕೃತಿಗಳು. ಚಪ್ಪರಿಕೆಯವರಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.