ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಂಗಕಲೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಮ್ಮ ಮಾತು, ವರ್ತನೆ ಹಾಗೂ ಉತ್ತಮವಾಗಿ ಬದುಕು ರೂಪಿಸಿಕೊಳ್ಳುವ ಕಲೆ ಸಿದ್ಧಿಸುತ್ತದೆ. ಇಂತಹ ಸಂಸ್ಕೃತಿಯೊಂದಿಗೆ ಮುಂದಿನ ಪೀಳಿಗೆಯನ್ನು ಬೆಳಸಬೇಕಾಗಿದೆ. ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಒಳಗೊಂಡ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ರಂಗನಿರ್ದೇಶಕ ಬಾಸುಮಾ ಕೊಡಗು ಹೇಳಿದರು.
ಅವರು ಲಾವಣ್ಯ ರಿ. ಬೈಂದೂರು ಆಶ್ರಯದಲ್ಲಿ ೪೦ನೇ ವರ್ಷದ ಸಂಭ್ರಮದೊಂದಿಗೆ ಜರುಗುತ್ತಿರುವ ರಂಗಲಾವಣ್ಯ – ಕಲಾಮಹೋತ್ಸವ ೨೦೧೭ರ ಏಳನೇ ದಿನದ ಕಾರ್ಯಕ್ರಮದಲ್ಲಿ ಶುಭಶಂಸನೆಗೈದರು. ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಆರಂಭಿಸುವ ಸಂಸ್ಥೆಗಳು ಅದರ ಸಾಧನೆಗಾಗಿಯೇ ತೊಡಗಿಕೊಳ್ಳುತ್ತದೆಯೇ ಹೊರತು ದುಡ್ಡಿನ ಹಿಂದೆ ಬೀಳುವುದಿಲ್ಲ ಎಂದರು.
ಲಾವಣ್ಯದ ಕಲಾವಿದರುಗಳಾದ ನಾಗರಾಜ ಗಾಣಿಗ ಬಂಕೇಶ್ವರ, ನಾಗರಾಜ ಪಿ. ಯಡ್ತರೆ, ಸುರೇಶ್ ಹುದಾರ್, ಸುಧಾಕರ ಜೆ, ನಾಗೇಂದ್ರ ಗಾಣಿಗ ಬಂಕೇಶ್ವರ, ನಾಗರಾಜ ತೊಂಡೆಹಿತ್ಲು ಅವರನ್ನು ಸನ್ಮಾನಿಸಲಾಯಿತು.
ಉಡುಪಿ ಪಿಪಿಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಮಾಧವಿ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ತಾಲೂಕು ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್, ಸಾಹಿತಿ ಯಾಕೂಬ್ ಖಾದರ್ ಗುಲ್ವಾಡಿ, ಉದ್ಯಮಿ ಗೋವಿಂದ ಪೂಜಾರಿ ಮುಂಬೈ, ಬೈಂದೂರು ಸೇನೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಚನ್ನಕೇಶವ ಉಪಾಧ್ಯಾಯ, ಸಮಾಜ ಸೇವಕ ಸಾಯಿದತ್ ಭಟ್ ಮೊದಲಾದವರು ಉಪಸ್ಥಿತರಿದ್ದರು.
ವಿಶ್ವನಾಥ ಆಚಾರ್ ಸನ್ಮಾನಿತರ ಪರಿಚಯ ವಾಚಿಸಿದರು. ಗಿರೀಶ್ ಬೈಂದೂರು ಸ್ವಾಗತಿಸಿದರು. ಜಿ. ತಿಮ್ಮಪ್ಪಯ್ಯ ಧನ್ಯವಾದಗೈದರು. ಮಂಜುನಾಥ ಶಿರೂರು ಕಾರ್ಯಕ್ರಮ ನಿರೂಪಿಸಿದರು.