ಕುಂದಾಪ್ರ ಡಾಟ್ ಕಾಂ ಲೇಖನ
ಕುಂದಾಪುರ: ತಾಲೂಕಿನ ಬಹು ಪುರಾತನ ದೇವಾಲಯಗಳಲ್ಲಿ ಸೇನಾಪುರದ ಶ್ರೀ ವಿಷ್ಣುಮೂರ್ತಿ ದೇವಸ್ಥಾನವೂ ಪ್ರಮುಖವಾದುದು. ಸುಮಾರು 1400 ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನ ಶ್ರೀ ವಿಷ್ಣುಮೂರ್ತಿ ದೇವರ ಆರಾಧನೆ ಪ್ರಧಾನವಾದುದು. ಮುರುಕಲ್ಲಿನ ಗರ್ಭಗುಡಿ ಹಾಗೂ ಎಡನಾಳಿ ಹೊಂದಿದ್ದ ದೇವಸ್ಥಾನದಲ್ಲಿ ಮೂರು ಅಡಿ ಎತ್ತರದ ರುದ್ರಾಕ್ಷಿ ಶಿಲೆಯಿಂದ ಭವ್ಯ ವಿಗ್ರಹ ನಿರ್ಮಿಸಲಾಗಿದೆ.
ಮುಂಭಾಗದಲ್ಲಿ ತೀರ್ಥ ಮಂಟಪ ಹಾಗೂ ಸುತ್ತಲೂ ಬಲಿ ಕಲ್ಲುಗಳಿವೆ. ಈಶಾನ್ಯದಲ್ಲಿ ಕ್ಷೇತ್ರಪಾಲ, ದೇವರ ಪುಷ್ಕರಿಣಿಯೂ ಇರುವ ಸ್ಥಳವಿದೆ. ದೇವಸ್ಥಾನ ಪಶ್ಚಿಮ ದಿಕ್ಕಿನಲ್ಲಿ ಪರಿವಾರ ದೈವಸ್ಥಾನವಿದೆ. ದೇವರ ಕಂಬಳಗದ್ದೆಯು ದೇಗುಲದ ಪಕ್ಕದಲ್ಲೇ ಇದೆ. ಅನಾದಿಕಾಲದಿಂದ ದೇವರ ರಥೋತ್ಸವ ಹಾಗೂ ಇತರ ಉತ್ಸವ ನಡೆದ ಬಗ್ಗೆ ಕುರುಹುಗಳು ಸಿಗುತ್ತದೆ.
ದೇವಸ್ಥಾನದ ಪರಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಹುಟ್ಟು ಕಟ್ಟು ಮತ್ತು ಬಾಗಿನಮನೆ ಕುಟುಂಬದವರು ಈಗಲೂ ದೇವಸ್ಥಾನದ ಪರಿಸದರಲ್ಲಿಯೇ ವಾಸವಾಗಿದ್ದಾರೆ. ದೇವಳದ ಶ್ರೀ ದೇವರ ಪ್ರಭಾವಳಿಯು ಹಿತ್ತಾಳೆಯದ್ದು. ಗರ್ಭಗೃಹದ ಮಹಾದ್ವಾರಕ್ಕೆ ಹಿತ್ತಾಳೆಯ ಕವಚನ್ನು ಅಳವಡಿಸಲಾಗಿದ್ದು ಅದರಲ್ಲಿ ಶಾಲಿವಾಹನ ಶಕ 1,666 ಸೇನಾಪುರ ಮಾಧವ ಆಚಾರ್ಯ ಸೌಭಾಗ್ಯವತಿ ಯಶೋಧ ದೇವಿಯವರ ಸೇವೆ ಎಂದು ಬರೆಯಲ್ಪಟ್ಟಿದೆ. 1997ರಲ್ಲಿ ದಿ. ಚಂದ್ರ ಮಂಜರು ೧೦ಲಕ್ಷ ರಊ. ಸ್ವಂತ ವೆಚ್ಚದಲ್ಲಿ ದೇವಸ್ಥಾನದ ಹೆಬ್ಬಾಗಿಲು ನಿರ್ಮಿಸಿದ್ದರು. ಹಿಂದಿನ ಕಾಲದಲ್ಲಿ ಸಹಸ್ರಾರು ವಧು-ವರರು ಶ್ರೀ ವಿಷ್ಣುಮೂರ್ತಿ ದೇವರ ಸಾನಿಧ್ಯದಲ್ಲಿ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ ಸಫಲತೆಯನ್ನು ಕಂಡುಕೊಂಡಿದ್ದರು.
ಸುಮಾರು 400ವರ್ಷಗಳಿಂದ ಸೇನಾಪುರ ಮಂಜರ ಮನೆ ಕುಟುಂಬಿಕರು ದೇವಸ್ಥಾನದ ಶ್ರೀ ದೇವರ ಪೂಜಾ ಕೈಂಕರ್ಕವನ್ನು ಮಾಡಿಕೊಂಡು ಬಂದಿದ್ದು ಪ್ರಸ್ತುತ ೯ನೇ ತಲೆಮಾರಿನ ಶ್ರೀ ವೆಂಕಟೇಶ ಮಂಜರು ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಂದಾಪ್ರ ಡಾಟ್ ಕಾಂ ಲೇಖನ.
ನವೀಕರಣ ಹಾಗೂ ಪುನರ್‌ಪ್ರತಿಷ್ಠೆ:
ದೇವಸ್ಥಾನದ ಗರ್ಭಗುಡಿ ಸಂಪೂರ್ಣ ಶಿಥಿಲಗೊಂಡಿದ್ದರಿಂದ ಊರ ಪರವೂರಿನ ಭಕ್ತಾದಿಗಳು ಸೇರಿ ಜೀರ್ಣೋದ್ಧಾರ ಸಮಿತಿ ರಚಿಸಿ ನವೀಕೃತ ಶಿಲಾದೇಗುಲದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಗರ್ಭಗೃಹವನ್ನು ಶಿಲೆಯಿಂದ, ಮೇಲ್ಭಾವಣಿಗೆ ತಾಮ್ರದ ಹೊದಿಕೆಯನ್ನು ಮಾಡಿ ದೇವಸ್ಥಾನದ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಲಾಗಿದೆ. ತೀರ್ಥ ಮಂಟಪ, ಕ್ಷೇತ್ರಪಾಲ ಹಾಗೂ ಪುಪ್ಕರಿಣಿಯ ಪುನರ್‌ನಿರ್ಮಾಣ ಕಾರ್ಯ ಜರುಗಿದೆ. ೨೦೧೭ ಫೆಬ್ರವರಿ ೫ರಿಂದ ೮ರ ತನಕ ನವೀಕೃತ ಶಿಲಾ ದೇಗುಲದ ಪ್ರತಿಷ್ಠಾ ಮಹೋತ್ಸವ ಹಾಗೂ ಬ್ರಹ್ಮಕಲಶೋತ್ಸವವನ್ನು ನಡೆಯಲಿದೆ.
ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಹಾಗೂ ನಿರಂತರ ಸೇವೆಗಾಗಿ ದೇಣಿಗೆ ನೀಡುವ ಭಕ್ತರು, ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ, ಚೆಕ್ ಅಥವಾ ಡಿಡಿ ಮೂಲಕ ತಲುಪಿಸಬಹುದಾಗಿದೆ.
ಬ್ಯಾಂಕ್: ವಿಜಯಾ ಬ್ಯಾಂಕ್
ಶಾಖೆ: ನಾಡ
ಐಎಫ್‌ಎಸ್‌ಸಿ ಕೋಡ್: VIJB0001154
ಖಾತೆ ಸಂಖ್ಯೆ: 115401011003215