ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ತಾಲೂಕು ೧೫ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಕಿರಿಮಂಜೇಶ್ವರ ಶ್ರೀ ಅಗಸ್ತ್ಯೇಶ್ವರ ದೇವಸ್ಥಾನದ ಆವರಣದಲ್ಲಿ ಫೆಬ್ರವರಿ ೨೩ ಗುರುವಾರದಂದು ಜರುಗಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಪತ್ರಕರ್ತರು, ಅಂಕಣಕಾರರು, ಸಾಹಿತಿಗಳೂ ಆದ ಸತೀಶ ಚಪ್ಪರಿಕೆಯವರನ್ನು ಆಯ್ಕೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದ್ದಾರೆ.
ಕುಂದಾಪುರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ ಒಂದು ದಿನದ ಈ ನುಡಿಹಬ್ಬವು ಬೆಳಿಗ್ಗೆ ೮ ಗಂಟೆಗೆ ಸರಿಯಾಗಿ ಧ್ವಜಾರೋಹಣದೊಂದಿಗೆ ಪ್ರಾರಂಭಗೊಳ್ಳಲಿದ್ದು, ಅನಂತರ ಕನ್ನಡ ತಾಯಿ ಭುವನೇಶ್ವರಿಯ ದಿಬ್ಬಣವು ಸಮ್ಮೇಳನಾಧ್ಯಕ್ಷರನ್ನು ಎದುರುಗೊಂಡು ಸಮ್ಮೇಳನ ನಡೆಯುವ ವೇದಿಕೆಗೆ ಕರೆ ತರಲಿದೆ ಎಂದು ತಿಳಿಸಿದರು.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಮಾತನಾಡಿ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ಪೂರೈಸಿರುವ ಸತೀಶ ಚಪ್ಪರಿಕೆ ಅವರು ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಆಶುಕವಯತ್ರಿ ಉಳ್ಳೂರು ಮೂಕಜ್ಜಿ ಅವರ ನೆನಪಿಗಾಗಿ ಉಳ್ಳೂರು ಮೂಕಜ್ಜಿ ವೇದಿಕೆಯಲ್ಲಿ ಕಾರ್ಯಕ್ರಮ ಜರುಗಲಿದೆ. ಈ ಭಾರಿ ಸಮ್ಮೇಳನದಲ್ಲಿ ಕುಂದಾಪ್ರ ಕನ್ನಡಕ್ಕೆ ವಿಶೇಷ ಪ್ರಾಧಾನ್ಯತೆಯನ್ನು ನೀಡಿ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಧ್ವಜಾರೋಹಣ, ಉದ್ಘಾಟನಾ ಸಮಾರಂಭದ ಬಳಿಕ ವಿಚಾರಗೋಷ್ಠಿ, ಕವಿಗೋಷ್ಠಿ, ಸಂವಾದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಕಾರ್ಯಕ್ರಮದ ವಿವರ:
ಪೂರ್ವಾಹ್ನ ೯:೩೦ಕ್ಕೆ ಉದ್ಘಾಟನಾ ಸಮಾರಂಭವು ಆಶುಕವಯತ್ರಿ ಉಳ್ಳೂರು ಮೂಕಜ್ಜಿ ವೇದಿಕೆಯಲ್ಲಿ ಜರುಗಲಿದ್ದು ಹಿರಿಯ ಸಾಹಿತಿಗಳೂ, ಶ್ರಂಗೇರಿ ಶ್ರೀ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಡಾ. ಎಚ್.ವಿ.ನರಸಿಂಹಮೂರ್ತಿಯವರು ವಿದ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ. ಉಡುಪಿ ಕಸಾಪ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅವರು ಆಶಯ ನುಡಿಗಳನ್ನಾಡಲಿದ್ದು, ಕುಂದಾಪುರ ತಾಲೂಕು ಕಸಾಪದ ನಿಕಟಪೂರ್ವ ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿಯವರು ಹೊಸ ಪುಸ್ತಕಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರೂ, ಕರಾರಸಾ ನಿಗಮದ ಅಧ್ಯಕ್ಷರಾದ ಕೆ ಗೋಪಾಲ ಪೂಜಾರಿ, ಉಡುಪಿ ಜಿಲ್ಲಾ ಪಂಚಾಯತ್‌ನ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾದ ಟಿ. ಬಾಬು ಶೆಟ್ಟಿ, ಕುಂದಾಪುರ ತಾ.ಪಂ. ಅಧ್ಯಕ್ಷೆ ಜಯಶ್ರೀ ಮೊಗವೀರ, ಜಿ.ಪಂ.ಸದಸ್ಯೆ ಗೌರಿ ದೇವಾಡಿಗ, ಕಿರಿಮಂಜೇಶ್ವರ ಗ್ರಾ.ಪಂ. ಅಧ್ಯಕ್ಷೆ ಲಲಿತಾ ಖಾರ್ವಿ, ಉಡುಪಿ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ ನಾಯಕ್ , ಕಿರಿಮಂಜೇಶ್ವರ ಅಗಸ್ತ್ಯೇಶ್ವರ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಕೆ. ಉಮೇಶ ಶ್ಯಾನುಭೋಗ್, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿಗಳಾದ ಅಮರಪ್ರಸಾದ್ ಶೆಟ್ಟಿ, ಕೆ.ಎಂ.ಎಫ್ ನಿರ್ದೇಶಕರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಅಗಸ್ತ್ಯೇಶ್ವರ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪರಶುರಾಮ್, ಉದ್ಯಮಿ ಎನ್. ಹಂಝಾ ನಾವುಂದ ಹಾಗೂ ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಡಾ. ಕನರಾಡಿ ವಾದಿರಾಜ ಭಟ್ ಉಪಸ್ಥಿತರಿರುತ್ತಾರೆ.
ಪೂರ್ವಾಹ್ನ ೧೧:೩೦ಕ್ಕೆ ಮೊದಲ ವಿಚಾರಗೋಷ್ಠಿ ನಡೆಯಲಿದ್ದು ಉಪನ್ಯಾಸಕರಾದ ರಾಜೀವ ನಾಯ್ಕ್ ಕೋನಳ್ಳಿ ‘ಪ್ರೋ.ಮೊಗೇರಿ ಗೋಪಾಲಕೃಷ್ಣ ಅಡಿಗರ ಕಾವ್ಯ ಮತ್ತು ಪ್ರಾದೇಶಿಕತೆ’ ಎನ್ನುವ ವಿಚಾರದಲ್ಲಿ ವಿಷಯ ಮಂಡನೆ ಮಾಡಲಿದ್ದು, ಅದಕ್ಕೆ ಪ್ರತಿಕ್ರಿಯೆಯನ್ನು ಹಿರಿಯ ಸಾಹಿತಿಗಳಾದ ಯು.ರಮೇಶ ವೈದ್ಯ ನೀಡಲಿದ್ದಾರೆ.
ಅಪರಾಹ್ನ ೧೨:೧೫ ಕ್ಕೆ ಕವಿಗೋಷ್ಠಿ ನಡೆಯಲಿದ್ದು, ಹತ್ತು ಮಂದಿ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಲಿದ್ದಾರೆ. ಉಡುಪಿ ಎಂಜಿಎಂ ಕಾಲೇಜಿನ ಉಪನ್ಯಾಸಕಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಪ್ರತಿಕ್ರಿಯೆ ನೀಡಲಿದ್ದಾರೆ. ಅಪರಾಹ್ನ ೧:೧೫ ರಿಂದ ಉದಯೋನ್ಮುಖ ಕಲಾವಿದರಿಂದ ಕನ್ನಡ ಗೀತ ಗಾಯನ-ನರ್ತನ-ಚಿತ್ರಣ ಕಾರ್ಯಕ್ರಮ ನಡೆಯಲಿದೆ.
ಅಪರಾಹ್ನ ೨:೧೫ ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದ್ದು, ಸಂವಾದಕರಾಗಿ ವಿಶ್ರಾಂತ ಉಪನ್ಯಾಸಕರಾದ ಎಸ್. ಜನಾರ್ದನ, ಉಪನ್ಯಾಸಕರಾದ ಶ್ರೀ ವಿಶ್ವನಾಥ ಕರಬ, ಪತ್ರಕರ್ತರಾದ ಅರುಣಕುಮಾರ ಶಿರೂರು ಹಾಗೂ ಶಿಕ್ಷಕರಾದ ಮಂಜುನಾಥ ದೇವಾಡಿಗ ಭಾಗವಹಿಸಲಿದ್ದಾರೆ.
ಅಪರಾಹ್ನ ೩ ಗಂಟೆಗೆ ಎರಡನೇ ವಿಚಾರಗೋಷ್ಠಿ ನಡೆಯಲಿದ್ದು, ಬಸ್ರೂರು ಶ್ರೀ ಶಾರದಾ ಕಾಲೇಜಿನ ಉಪನ್ಯಾಸಕ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಅವರು ‘ಕುಂದಗನ್ನಡ ಬಹುಸಂಸ್ಕೃತಿ-ಅಧ್ಯಯನದ ಸಾಧ್ಯತೆಗಳು’ ಎನ್ನುವ ವಿಚಾರದಲ್ಲಿ ಪ್ರಬಂಧ ಮಂಡಿಸಲಿದ್ದು, ಅದಕ್ಕೆ ಡಾ.ಕಿಶೋರಕುಮಾರ ಶೆಟ್ಟಿ ಪ್ರತಿಕ್ರಿಯಿಸಲಿದ್ದಾರೆ.
ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ತಾಲೂಕು ಕಸಾಪ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಜಾನಪದ ವಿ.ವಿ.ಯ ಸಿಂಡಿಕೇಟ್ ಸದಸ್ಯರಾದ ಡಾ. ಸೈಯದ್ ಝಮೀರುಲ್ಲಾ ಷರೀಫ್ ಸಮಾರೋಪ ಭಾಷಣ ಮಾಡಲಿದ್ದಾರೆ. ಸಮ್ಮೇಳನಾಧ್ಯಕ್ಷರಾದ ಸತೀಶ ಚಪ್ಪರಿಕೆ ಪ್ರತಿಸ್ಪಂದನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ತಾ.ಪಂ.ಉಪಾಧ್ಯಕ್ಷರಾದ ಪ್ರವೀಣಕುಮಾರ ಶೆಟ್ಟಿ, ತಾ.ಪಂ.ಸದಸ್ಯೆ ಶ್ಯಾಮಲಾ ಕುಂದರ್, ತಾ.ಪಂ.ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾದ ಮಹೇಂದ್ರ ಪೂಜಾರಿ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು, ನಿವೃತ್ತ ಶಿಕ್ಷಕರಾದ ಸದಾಶಿವ ಶ್ಯಾನುಭೋಗ್, ಕಿರಿಮಂಜೇಶ್ವರ ಜುಮ್ಮಾ ಮಸೀದಿಯ ಕೆ.ಎಂ.ಇರ್ಷಾದ್, ಉಡುಪಿ ತಾಲೂಕು ಕಸಾಪದ ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ, ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಡಾ. ಎನ್.ಕೆ.ಬಿಲ್ಲವ, ಶ್ರೀ ಮಂಜುನಾಥ ಉಡುಪ, ಉದ್ಯಮಿ ಜಗದೀಶ ಶೆಟ್ಟಿ, ಮಹಾಬಲ ಕುಂದರ್, ವಿಶ್ರಾಂತ ಪ್ರಾಧ್ಯಾಪಕ ವಾಸುದೇವ ಕಾರಂತ, ಕಿರಿಮಂಜೇಶ್ವರ ಗಾ.ಪಂ.ಉಪಾಧ್ಯಕ್ಷ ಶೇಖರ ಖಾರ್ವಿ ಭಾಗವಹಿಸಲಿದ್ದಾರೆ.
೧೫ ಜನ ಸಾಧಕರಿಗೆ ಸನ್ಮಾನ:
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೧೫ ಜನ ಸಾಧಕರಿಗೆ ಸನ್ಮಾನಿಸಲಾಗುವುದು. ಎಂ.ಚಂದ್ರಪ್ರಭಾ ಆರ್.ಹೆಗ್ಡೆ, ಡಾ. ಕುಸುಮಾಕರ ಹೆಬ್ಬಾರ್, ಪಾರ್ವತಿ ಜಿ. ಐತಾಳ್, ವೈ.ಎನ್.ವೆಂಕಟೇಶಮೂರ್ತಿ, ಸುಬ್ರಹ್ಮಣ್ಯ ಧಾರೇಶ್ವರ, ತೀರ್ಥಳ್ಳಿ ಗೋಪಾಲ ಆಚಾರ್ಯ, ಸತ್ಯನಾರಾಯಣ ಕೊಡೇರಿ, ಪ್ರಮೀಳಾ ಕುಂದಾಪುರ, ಶ್ರೀ ಸಬ್ಲಾಡಿ ಮಂಜಯ್ಯ ಶೆಟ್ಟಿ, ಸುಬ್ರಹ್ಮಣ್ಯ ಪಡುಕೋಣೆ, ರಾಮಚಂದ್ರ ನಾವಡ, ಶ್ರೀ ಪಾಂಡುರಂಗ ಕೆ., ಡಾ. ಭಾರತಿ ಮರವಂತೆ, ರಘುರಾಮ ಕುಲಾಲ ಆಲೂರು ಹಾಗೂ ತೆಕ್ಕಟ್ಟೆ ಫ್ರೆಂಡ್ಸ್ ಸಂಸ್ಥೆ ಇವರುಗಳನ್ನು ಕಸಾಪದ ಮಾಜಿ ಜಿಲ್ಲಾಧ್ಯಕ್ಷರಾದ ಎ.ಎಸ್.ಎನ್.ಹೆಬ್ಬಾರ್ ಅವರು ಸನ್ಮಾನಿಸಲಿದ್ದಾರೆ.
ಸಂಜೆ ೫:೩೦ ರಿಂದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಕ್ಷಕಿನ್ನರ ಸಾಂಸ್ಕೃತಿಕ ಸಭಾ ಹಕ್ಲಾಡಿಯವರಿಂದ ಯಕ್ಷಗಾನ ಶಮಂತಕ ಮಣಿ ಪ್ರದರ್ಶಗೊಳ್ಳಲಿದೆ.
ಸುದ್ದಿಗೋಷ್ಠಿಯಲ್ಲಿ ನಿವೃತ್ತ ಶಿಕ್ಷಕ ಸದಾಶಿವ ಶ್ಯಾನುಭೋಗ್, ಕಸಾಪ ತಾಲೂಕು ಕಾರ್ಯದರ್ಶಿ ಡಾ. ಕಿಶೋರ್‌ಕುಮಾರ್ ಶೆಟ್ಟಿ, ಕೋಶಾಧ್ಯಕ್ಷ ರವೀಂದ್ರ ಎಚ್. ಬೈಂದೂರು ಹೋಬಳಿ ಅಧ್ಯಕ್ಷ ಗಣಪತಿ ಹೋಬಳಿದಾರ್, ಸದಸ್ಯ ಪ್ರಕಾಶ್ ಹೆಬ್ಬಾರ್ ಉಪಸ್ಥಿತರಿದ್ದರು.