ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ: ಒಬ್ಬರಿಗೆ ಒಂದು ದಿನದ ಆಹಾರ ನೀಡಿ ಸಹಾಯ ಮಾಡುವುದಕ್ಕಿಂತ ಆತನ ಜೀವನ ಪರ್ಯಂತ ಸುಖಮಯ ಜೀವನ ನಡೆಸಲು ಸಾಧ್ಯ ವಾಗುವಂತಹ ಅವಕಾಶಗಳನ್ನು ಕಲ್ಪಿಸಿಕೊಡುವ ಮೂಲಕ ಆತನ ಇಡೀ ಸಂಸಾರಕ್ಜೆ ಆಧಾರಸ್ತಂಭವಾಗಿ ನಿಲ್ಲಲು ರೋಟರಿಯಂತಹ ಸೇವಾ ಸಂಸ್ಥೆ ಆಸರೆಯಾಗುತ್ತದೆ ಎಂದು ರೋಟರಿ ಜಿಲ್ಲಾ ಗವರ್ನರ್ ರೊ.ಡಿ.ಎಸ್ ರವಿ ಅಭಿಪ್ರಾಯ ಪಟ್ಟರು. ರೋಟರಿ ಉಡುಪಿ ಮಣಿಪಾಲ ಸಂಸ್ಥೆಗೆ ಜಿಲ್ಲಾ ಗವರ್ನರ್ ರವರ ಅಧಿಕೃತ ಭೇಟಿ ಸಂದರ್ಭದಲ್ಲಿ ಮಣಿಪಾಲದ ರೋಟರಿ ಸಭಾಂಗಣದಲ್ಲಿ ಸುಮಾರು ಇಪ್ಪತ್ತು ಹೊಲಿಗೆ ಮೆಷೀನ್ ಗಳನ್ನು ವಿತರಿಸುತ್ತಾ ಮಹಿಳಾ ಸಬಲೀಕರಣ ಬರೀ ಮಾತಿನಲ್ಲಿ ಉಳಿಯದೆ ಕೃತಿಯಲ್ಲಿ ಕಂಡುಬಂದಿದ್ದು ಮಹಿಳೆ ಹಾಗು ಮಕ್ಕಳ ಏಳಿಗೆಗೆ ಜಾಸ್ತಿ ಪ್ರಾಮುಖ್ಯತೆ ಕೊಡುತ್ತಿರುವ ಸಂಸ್ಥೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಪಂಚನಬೆಟ್ಟು ಅಂಗನವಾಡಿಗೆ ಸುಮಾರು ೫೦೦೦೦ ರೂಗಳನ್ನು ಶೌಚಾಲಯ ನಿರ್ಮಾಣಕ್ಕೆ ಹಾಗು ಸುಮಾರು ೨೦೦೦೦ ರೂಗಳ ವೆಚ್ಚದಲ್ಲಿ ಪುಟಾಣಿಗಳಿಗೆ ಶಾಲಾ ಸಮವಸ್ತ್ರ ವಿತರಿಸಲಾಯಿತು. ಸುತ್ತುಮುತ್ತಲಿನ ಇಂಟರ‍್ಯಾಕ್ಟ್ ಮಕ್ಕಳಿಗೆ ೫೦೦೦೦ ರೂಗಳ ವಿದ್ಯಾರ್ಥಿ ವೇತನ, ಸರಕಾರಿ ಆಸ್ಪತ್ರೆಗೆ ಕ್ಷಯರೋಗ ತಪಾಸಣಾ ಸಲಕರಣೆಗಳ ನೀಡಿಕೆ, ರೋಟರಿ ಅಂತರಾಷ್ಟ್ರೀಯ ದತ್ತುನಿಧಿಗೆ ದೊಡ್ಡ ಮೊತ್ತದ ದೇಣಿಗೆ ಹೀಗೆ ಹತ್ತಿ ಹಲವು ಜನಹಿತ ಕಾರ್ಯಗಳನ್ನು ಹಮ್ಮಿಕೊಂಡಿತ್ತು.
ರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟದಲ್ಲಿ ರಜತ ಪದಕ ಪಡೆದ ಆನೆಟ್ ಪ್ರಜ್ಞಾ ಕೊಡವೂರು ಇವರನ್ನು ಅಭಿನಂದಿಸಲಾಯಿತು. ಸಹಾಯಕ ಗವರ್ನರ್ ರೊ. ಸುಬ್ರಹ್ಮಣ್ಯ ಬಾಸ್ರಿ ಕ್ಲಬ್ ನ ಮುಖವಾಣಿ ಕಾಂಚ್ ನ್ನು ಬಿಡುಗಡೆಗೊಳಿಸಿದರು.ರೋಟರಿ ಉಡುಪಿ ಮಣಿಪಾಲದ ಅಧ್ಯಕ್ಷ ರೊ.ಶ್ರೀಕಾಂತ್ ಪ್ರಭು ಸ್ವಾಗತಿಸಿ ,ಕಾರ್ಯದರ್ಶಿ ರೊ.ಬಾಲಕೃಷ್ಣ ಮಡ್ಡೋಡಿ ಕ್ಲಬ್ ನ ಸಾಧನೆಗಳ ಪರಿಚಯ ಮಾಡಿಕೊಟ್ಟರು.ರೊ.ಜಯ್ ರಾಜ್ ಶೆಟ್ಟಿ ವಂದಿಸಿದರು.ರೊ. ಶುಭಾ ರಾವ್ ಕಾರ್ಯಕ್ರಮ ನಿರೂಪಿಸಿದರು.