ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ: ಸಾಸ್ತಾನ ಟೋಲ್ ಕೇಂದ್ರದಲ್ಲಿ ಸ್ಥಳೀಯರಿಗೆ ಶುಲ್ಕ ವಿನಾಯಿತಿ ಮುಂದುವರಿಸುವಂತೆ ಕೋರಿ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಸದಸ್ಯರು ಫೆ.25ರಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಈ ಸಂದರ್ಭ ಹೆದ್ದಾರಿ ಸಮಸ್ಯೆಗಳ ಕುರಿತು ಸಮಾಲೋಚನೆ ನಡೆಸಲಾಯಿತು ಹಾಗೂ ಅವೈಜ್ಞಾನಿಕ, ಅಪೂರ್ಣ ಕಾಮಗಾರಿ ಬಗ್ಗೆ ಜಿಲ್ಲಾಧಿಧಿಕಾರಿಗಳಿಗೆ ವಿವರಣೆ ನೀಡಲಾಯಿತು. ಸ್ಥಳೀಯರಿಗೆ ಟೋಲ್ ವಿನಾಯಿತಿ ನೀಡದಿದ್ದಲ್ಲಿ ಹೋರಾಟ ಮುಂದುವರಿಸುವುದಾಗಿ ತಿಳಿಸಲಾಯಿತು ಹಾಗೂ ಜಿಲ್ಲೆಯ ಮರಳು ಸಮಸ್ಯೆಗೆ ಪರಿಹಾರ ಒದಗಿಸುವಂತೆ ಕೋರಲಾಯಿತು.ಟೋಲ್ ಸಮಸ್ಯೆಯ ಕುರಿತು ತನ್ನ ವ್ಯಾಪ್ತಿಗೆ ಬರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ಜಿಲ್ಲಾಧಿಕಾರಿಗಳು ಈ ಸಂದರ್ಭ ನೀಡಿದರು.
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಹೆದ್ದಾರಿ ಜಾಗೃತಿ ಸಮಿತಿಯ ಪ್ರತಾಪ್ ಶೆಟ್ಟಿ ಸಾಸ್ತಾನ, ಜಿಲ್ಲಾ ಲಾರಿ ಮಾಲಿಕರ ಸಂಘದ ಅಧ್ಯಕ್ಷ ರಾಜೇಶ ಕಾವೇರಿ ಹಾಗೂ ಹೆದ್ದಾರಿ ಜಾಗೃತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.