ಕೋಟೇಶ್ವರ: ಗೋಪಾಡಿಯಲ್ಲಿ ಎ.11ರಂದು ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಇಂದಿರಾ ಮೊಗವೀರ ಅವರ ಮನೆಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಅವರು ಗುರುವಾರ ರಾತ್ರಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿ ಧೈರ್ಯ ತುಂಬಿದರು.
ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ವಿಕ್ಟಿಂ ಪರಿಹಾರ ಯೋಜನೆಯಡಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ಲಭಿಸುವ ರೂ.3 ಲಕ್ಷ ಪರಿಹಾರವನ್ನು ಗೋಪಾಡಿಯ ಮೃತ ಇಂದಿರಾ ಅವರ ಕುಟುಂಬಕ್ಕೆ ದೊರಕಿಸಿಕೊಡುವಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಾಮಾಣಿಕ ಪ್ರಯತನ ಮಾಡುವುದಾಗಿ ಹೇಳಿದರಲ್ಲದೇ, ಈ ಪರಿಸರದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುವುದು. ಕೊಲೆ ಪ್ರಕರಣದ ತನಿಖೆಯಲ್ಲಿ ಯಾವುದೇ ಲೋಪವಾಗದಂತೆ ಹಾಗೂ ಆರೋಪಿಯು ಈ ಪ್ರಕರಣದಲ್ಲಿ ತಪ್ಪಿಸಿಕೊಳ್ಳಬಾರದಂತೆ ಜವಾಬ್ದಾರಿಯುವಾಗಿ ಪ್ರಕರಣವನ್ನು ದಾಖಲಿಸಲಾಗಿದೆ. ಇಂತಹ ಘಟನೆ ಗ್ರಾಮೀಣ ಪ್ರದೇಶದಲ್ಲಿ ಮರುಕಳಿಸದಂತೆ ನೋಡಿಕೊಳ್ಳುವಲ್ಲಿ ಪೊಲೀಸ್ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವಕಿ ರಾಧಾದಾಸ್ ಕುಂಭಾಸಿ, ಗಣೇಶ್ ಪುತ್ರನ್, ಮೊಗವೀರ ಸಮಾಜದ ಪ್ರಮುಖರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು , ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್, ಕುಂದಷಾಪುರ ಎಸ್.ಐ ನಾಸಿರ್ ಹುಸೇನ್, ಮಹಿಳಾ ಠಾಣೆಯ ಎಸ್.ಐ. ಸುಜಾತ ಮೊದಲಾದವರು ಉಪಸ್ಥಿತರಿದ್ದರು.