ಮರೆಯಾಗದಿರಲಿ ಕರಾವಳಿ ಕಲೆ ಯಕ್ಷಗಾನ

Call us

Call us

Call us

Yakshaganaಮಳೆಗಾಲ ಮುಗಿದು ಚಳಿಗಾಲ ಪ್ರಾರಂಭವಾದೊಡನೆ ಕರಾವಳಿಯ ಕಡೆ ಎಲ್ಲೆಂದರಲ್ಲಿ ಮೊಳಗುವುದು ಯಕ್ಷಗಾನದ ಪದ,ತಾಳ,ಹೆಜ್ಜೆ,ಚಂಡೆಯ ಸದ್ದು.ಮಳೆಗಾಲದಲ್ಲಿಯೂ ಒಳಾಂಗಣದಣದಲ್ಲಿ ಇದರ ಛಾಪಿದ್ದರು,ಚಳಿಗಾಲ,ಬೇಸಿಗೆಯ ಕಾಲದ ರಾತ್ರಿಗಳಲ್ಲಿ ಇದರ ಪ್ರದರ್ಶನದ ಮಜವೇ ಬೇರೆ. ಅದು ಹರಕೆ ಬಯಲಾಟವಾಗಿರಬಹುದು, ಇಲ್ಲಾ ಖಾಸಗಿ ಮಾಲಿಕತ್ವದಲ್ಲಿ ನಡೆಯುವ ಪ್ರದರ್ಶನವಾಗಿರಬಹುದು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರೊರೆಗೂ ಭೇದ-ಭಾವವಿಲ್ಲದೆ ರಾತ್ರಿಪೂರ್ತಿ ಅತ್ಯಾಸಕ್ತಿಯಿಂದ ರಂಗಮಂದಿರದ ಎದರು ಕುಳಿತು ಮನೋರಂಜನೆ ಪಡೆಯುವ ಪ್ರದರ್ಶನ ಈ ಯಕ್ಷಗಾನ.

Call us

Click Here

ವೇಷಭೂಷಣ, ಅಭಿನಯ, ಪದ ಹಾಗೂ ಮಾತುಗಾರಿಕೆಯಲ್ಲೇ ಅದ್ಭುತಲೋಕ ಸೃಷ್ಟಿಸುವುದರ ಜೊತೆಗೆ ಕನ್ನಡ ಸಂಸ್ಕ್ರತಿಯನ್ನು ಮಡಿಲಲ್ಲಿಟ್ಟುಕೊಂಡು ಬೆಳೆದು, ಬೆಳೆಸಿದ ಕಲೆ ಕನ್ನಡ ಯಕ್ಷಗಾನ. ಕೇವಲ ಪಂಡಿತರಿಗಷ್ಟೆ ಸೀಮಿತವಾಗಿರದೆ ಜಾತಿ-ಮತಗಳೆನ್ನದೇ, ಎಲ್ಲರನ್ನೂ ಒಳಗೊಂಡ ಕಲೆ ಇದು. ಬಯಲಾಟ, ದಶಾವತಾರ ಆಟ ಎಂದು ಕರೆಯಲ್ಪಡುತ್ತಿದ್ದ ಕನ್ನಡದ ಪ್ರಾಚೀನ ರಂಗಭೂಮಿಗೆ, ಸುಮಾರು ೧೦೦-೧೫೦ ವರ್ಷಗಳ ಹಿಂದೆಯೇ ಬಂದ ಹೆಸರು ’ಯಕ್ಷಗಾನ’. ಇದು ಒಂದು ಮೂಲಗಳ ಅಭಿಪ್ರಾಯ. ಆದರೆ ಸುಮಾರು ಕ್ರಿ.ಶ ೧೫೦೦ ರಷ್ಟರಲ್ಲಿಯೆ ’ಯಕ್ಷಗಾನ’ವೆಂಬ ಪದ ರೂಢಿಗೆ ಬಂದಿದ್ದು “ಯಕ್ಕಲಗಾನ”ವು ಯಕ್ಷಗಾನವಾಗಿದೆ ಎಂದು ಇನ್ನೂ ಕೆಲವು ವಿದ್ವಾಂಸರು ಹೇಳುತ್ತಾರೆ.

ಹೌದು!!.. ಯಕ್ಷಗಾನದ ಸೊಬಗೆ ಅಂತದ್ದು., ಯಕ್ಷಗಾನದ ಮೂಲಸೆಲೆ ಇರುವುದು ಗ್ರಾಮೀಣ ಪ್ರದೇಶದಲ್ಲೆ. ವೃತ್ತಿ ಮತ್ತು ಹವ್ಯಾಸಿ ಮೇಳಗಳು,ಕಲಾವಿದರು ಪೋಷಕರು, ಸಂಘಟನೆಗಳು ಇರುವುದು ಇಲ್ಲಿಯೆ. ಎಲ್ಲಕಿಂತ ಪ್ರಮುಖವಾಗಿ ಯಕ್ಷಗಾನದ ಪ್ರೇಕ್ಷಕ ಸಮೂಹ ಗ್ರಾಮಾಂತರದ ಜನರೆ ಎಂದರೆ ತಪ್ಪಲ್ಲ. ಕರಾವಳಿಯ ಈ ಕಲೆ ಇಂದಿಗೂ ಮಹತ್ವದ ಕಲಾಪ್ರಕಾರಗಳಲ್ಲೊಂದಾಗಿದ್ದು, ಇಂದಿಗೂ ದೇಶ ವಿದೇಶಗಳಲ್ಲಿ ತನ್ನ ಘನತೆ ಉಳಿಸಿಕೊಂಡಿದೆ. ಸಾಮಾನ್ಯವಾಗಿ ರಾತ್ರಿ ವೇಳೆ ನಡೆಯುವ ಯಕ್ಷಗಾನ ದೇವಸ್ತಾನದ ಆಡಳಿತದಲ್ಲಿ ಮೇಳಗಳನ್ನು ಹೊಂದಿರುತ್ತವೆ. ಅಲ್ಲದೆ ಕಲಾಸಕ್ತ ಜನರು ತಮ್ಮದೆ ಸಂಘ ಮಾಡಿ ಆಟ ಪ್ರದರ್ಶನ ಮಾಡುತ್ತಿರುತ್ತಾರೆ. ಯಕ್ಷಗಾನದಲ್ಲಿ ೩ ರೀತಿಯ ಪ್ರಕಾರಗಳಿವೆ. ಅವುಗಳೆಂದರೆ ತೆಂಕುತಿಟ್ಟು, ಬಡಗುತಿಟ್ಟು, ಉತ್ತರದ ತಿಟ್ಟು(ಬಡಾ ಬಡಗು). ಸಾಮಾನ್ಯವಾಗಿ ಉತ್ತರ-ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಉತ್ತರದ ತಿಟ್ಟು ಬಯಲಾಟ ಕಂಡುಬಂದರೆ, ಉಡುಪಿಯಲ್ಲಿ ಬಡಗುತಿಟ್ಟು, ದಕ್ಷಿಣಕನ್ನಡ ಕಾಸರಗೋಡು ಜಿಲ್ಲೆಗಳಲ್ಲಿ ತೆಂಕುತಿಟ್ಟು ಶೈಲಿಯ ಬಯಲಾಟಗಳನ್ನು ಕಾಣಬಹುದಾಗಿದೆ. ವಿನ್ಯಾಸ, ನೃತ್ಯದ ಶೈಲಿ ಭಾಗವತಿಕೆ ಹಾಗೂ ಹಿಮ್ಮೇಳಗಳ ಕಂಡು ಬರುವ ವ್ಯತ್ಯಾಸಗಳ ಆಧಾರದ ಮೇಲೆ ಈ ವಿಂಗಡಣೆಯನ್ನು ಮಾಡಲಾಗಿದೆಯೇ ಹೊರತು, ಯಕ್ಷಗಾನದ ಮೂಲತತ್ವ ಆಶಯಗಳು ೩ ಶೈಲಿಯಲ್ಲಿಯೂ ಒಂದೆಯೇ ಆಗಿವೆ.

ಭಾರತೀಯ ಸಂಧರ್ಭದಲ್ಲಿ ಎಲ್ಲ ಕಲೆಗಳಿಗೂ ಧಾರ್ಮಿಕ ಹಿನ್ನಲೆ ಇರುವುದನ್ನು ಸಾಮಾನ್ಯವಾಗಿ ಕಾಣುತ್ತೇವಾದರೂ, ಧಾರ್ಮಿಕ ಚೌಕಟ್ಟಿನಲ್ಲೇ ನಿಂತುಕೊಳ್ಳುವುದಿಲ್ಲ. ಅದನ್ನು ಮೀರಿ ಮನರಂಜನೆ, ಕುತೂಹಲ, ಆಸಕ್ತಿಗಳು ಕಲೆಯ ಒಳಗಡೆ ಸಾಮರ್ಥ್ಯಾನುಸಾರ ಸೇರಿಕೊಳ್ಳುತ್ತವೆ. ಇದನ್ನು ಒಟ್ಟಾಗಿ ಕಲಾತ್ಮಕ ದೃಷ್ಟಿಕೋನವೆನ್ನಬಹುದು. ಮಾನವನ ಸೃಜನಶೀಲ ಮನಸ್ಸು ತನ್ನ ಪರಿಸರದ ಕಲೆಯೊಂದರ ಜೀವಂತ ಪ್ರಕ್ರೀಯೆಯ ಜೊತೆಗೆ ಅನುಸಂಧಾನವನ್ನು ಮಾಡುತ್ತಿರುತ್ತದೆ. ಆಗೆಲ್ಲಾ ಜೀವಂತವಾದ ಕಲೆಗಳು ನಿರಂತರವಾಗಿ ಪರಿವರ್ತನೆಗೊಳ್ಳುತ್ತಾ ಹೋಗುತ್ತವೆ. ಯಕ್ಷಗಾನದ ಮಟ್ಟಿಗೆ ಇದು ನಿಜ. ಹೊಸ ಹೊಸವಾದ ನಿರಂತರ ಪ್ರಯೋಗಗಳ ಜೊತೆಗೆ ಅನಿವಾರ್ಯತೆಗೋ, ಆಧುನಿಕತೆಯ ನೂತನತೆಗೊ ಅಲ್ಲಲ್ಲಿ ಅಲ್ಪ-ಸ್ವಲ್ಪ ಬದಲಾವಣೆಯನ್ನು ಕಂಡಿದೆ. ಹಿಂದೆ ’ದೊಂಬಿ’ಯ ಬೆಳಕಲ್ಲಿ ಇದ್ದ ಆಟ ಇಂದು ’ದಿಗ್ಭೆಳ’ಕಾಗಿದೆ. ಹಿಂದಿದ್ದ ’ಹೊಳೆ ಮುಂಡಿಗೆ’ ಎಂಬ ಹಗುರ ಮರದಿಂದ ಮಾಡುತ್ತಿದ್ದ ವೇಷ ಇಂದು ಬದಲಾಗಿದೆ. ರಂಗಸ್ಥಳದ ಮಧ್ಯದಿಂದ ಇದ್ದ ಪ್ರವೇಶ ಎಡಬಲಕ್ಕೆ ತಿರುಗಿದೆ. ಹೆಚ್ಚಾಗಿ ಪೌರಾಣಿಕ ಕಥೆಯನ್ನೇ ಆಧರಿಸಿ ಬಯಲಾಟವಿರುವುದು ಸಾಮಾನ್ಯವಾದರೂ, ಇತ್ತೀಚಿಗೆ ಪಾಂಡಿತ್ಯ ಹಾಗೂ ನವ ಬರಹಗಾರರ ಕಥೆಗಳೂ ಪ್ರಸಂಗಗಳಾಗಿ ರಂಗಸ್ಥಳದಲ್ಲಿ ಮಿಂಚಿ ಹೊಸ ಆಯಾಮ ಪಡೆಯುತ್ತಿವೆ. ಆದರೂ ನಗರಪ್ರದೇಶದಲ್ಲಿರುವ ಜನರು ಇಂದಿನ ವಿದೇಶಿ ಸಂಸ್ಕ್ರತಿಯ ಕಲೆಗಳನ್ನೆ ನೋಡುವ, ಮಾಡುವ ಪ್ರವೃತ್ತಿ ಹೊಂದಿದ್ದು, ಅದು ನಮಗೆ ಅರ್ಥವಾಗಲ್ಲಪ್ಪ ಎಂಬ ಉದ್ಗಾರ ತೆಗೆಯುತ್ತಾರೆ. ಎಲ್ಲೋ ದೂರದ ದೇಶದ ಸಂಸ್ಕ್ರತಿಯ ಕಲೆಯನ್ನು ಕಲಿಯುವ ನಾವು ಪಕ್ಕದಲ್ಲೇ ಇರುವುದನ್ನ ಮರೆಯುತ್ತಿದ್ದೆವೆ. ಇದು ನಮ್ಮ ದೌರ್ಭಾಗ್ಯ ಅಲ್ಲದೆ ಮತ್ತೇನು ಅಲ್ವಾ!!? ಇದು ಯಕ್ಷಗಾನವೆಂಬ ಕಲೆಗೆ ಮಾತ್ರಾ ಸಂಬಂದಿಸಿದ್ದಲ್ಲ. ಸಾಮಾನ್ಯವಾಗಿ ಹಳ್ಳಿ-ಹಳ್ಳಿಗಳಲ್ಲಿ ಅನಾದಿಕಾಲದಿಂದ ಬಂದಿರುವ ಎಲ್ಲಾ ಕಲೆಗೂ ನಾವು ಕೊಡುತ್ತಿರುವ, ನಾವು ಉಳಿಸುತ್ತಿರುವ ಬೆಲೆ. ಅದೇನೆ ಇರಲಿ ಕರಾವಳಿ ಕಡೆಯ ಈ ಕಲೆಗೆ ಸರಿ-ಸಮಾನವಾದ ಕಲೆ ಬೇರೊಂದಿಲ್ಲ ಎಂಬುದಂತೂ ನಿಜ.

ಇಂತಹ ಅಪೂರ್ವವಾದ ಕಲೆ ಹಿರಿಯರಿಂದ ನಮ್ಮಲ್ಲಿಗೆ ಅನೂಚಾನವಾಗಿ ಬಂದಿದೆ. ನಮ್ಮ ಸಂಸ್ಕ್ರತಿ ಪ್ರಜ್ಞೆ ಮತ್ತು ಪುರಾಣ ಜ್ಞಾನ ಹೆಚ್ಚಿಸುವ ಬಯಲಾಟದ ಮೂಲ ಪ್ರಕಾರವನ್ನ ಪರಿಪಕ್ವವಾಗಿ ಎಲ್ಲರೂ ಗೌರವಿಸುವಂತೆ ಮಾಡಿದ ಯಕ್ಷಗಾನವನ್ನು ಉಳಿಸಿ ಅದರ ಅಂದಚಂದ ಹಾಳಾಗದಂತೆ ಕಾಪಾಡಿಕೊಳ್ಳುದು ನಮ್ಮೆಲ್ಲರ ಹೊಣೆ. ಇದು ಇತ್ತೀಚಿಗೆ ವ್ಯಾಪಾರಿಕಣದತ್ತ ಸಾಗುತ್ತಿದ್ದು ಅದನ್ನು ಮೂಲಸ್ವರೂಪದಲ್ಲೆ ಉಳಿಸಿ ಬೆಳೆಸುವುದು ಕಲಾವಿದರ ಹೊಣೆ ಕೂಡ ಆಗಿದೆ.ಕಲಾಸಕ್ತರು, ಕಲಾವಿದರು ತಪ್ಪಿದಾಗ ನಿಷ್ಠುರವಾಗಿ ಸರಿಪಡಿಸುವ ಅವಶ್ಯಕತೆ ಎಂದಿಗಿಂತ ಈಗಿದೆ. ಆದಷ್ಟು ಅಭಿರುಚಿಯನ್ನು ಹಾಳು ಮಾಡದೆ ಕಲೆಯ ಮೂಲ ಅಂಶಗಳನ್ನ ತಲುಪಿಸುವ ಹೊಣೆ ಕಲಾವಿದರ ಮೇಲೂ ಇದೆ. ಅವೆಲ್ಲವನ್ನು ನಾವು ಗಮನದಲ್ಲಿಟ್ಟುಕೊಂಡು ನಮ್ಮ ಕಲೆಯನ್ನು ಗೌರವಿಸಬೇಕು, ಬೆಳೆಸಬೇಕಾಗಿದೆ. ಹಿಂದೆ ಶಿವರಾಮ ಕಾರಂತರು, ಜಾನಪದೀಯ ಕಲೆ ಯಕ್ಷಗಾನದಿಂದ ಪ್ರಭಾವಿತರಾಗಿ ಅದನ್ನು ಉಳಿಸಿ ಬೆಳೆಸುವಲ್ಲಿ ಪರಿಶ್ರಮ ವಹಿಸಿದ್ದರು. ಇಂದಿನ ಸಿನಿಮಾ, ಸುಗಮ ಸಂಗೀತ, ಟಿ.ವಿ ಮತ್ತು ಶಾಸ್ತ್ರೀಯ ಎನಿಸಿಕೊಂಡ ಕಲೆಗಳ ಹಾವಳಿಯಿಂದ ನಮ್ಮ ಜಾನಪದೀಯ ಕಲೆಗಳು ದೊಡ್ಡ ಹೊಡೆತ ಅನುಭವಿಸುತ್ತಿವೆ. ಕರಾವಳಿಯ ಕಡೆ ಲಕ್ಷಾಂತರ ಅಭಿಮಾನಿಗಳಿರುವ ಯಕ್ಷಗಾನಕ್ಕೂ ಈ ಹೊಡೆತ ತಪ್ಪಿದಲ್ಲ. ಆದರೆ ಅದಕ್ಕೆ ಅಸ್ಪದಕೊಡದೆ ಕಲೆಯನ್ನ ಬೆಳೆಸಬೇಕು. ಅದರ ಹೆಮ್ಮೆಯನ್ನು ಹೆಮ್ಮರವಾಗಿಸಬೇಕು. ಅದರಲ್ಲಿರುವ ಕಲಾ ಸೌಂದರ್ಯವನ್ನು ಸವಿಯಬೇಕು ಏನಂತೀರಾ?

Click here

Click here

Click here

Click Here

Call us

Call us

-ಸಂದೀಪ್ ಶೆಟ್ಟಿ ಹೆಗ್ಗದ್ದೆ
ಯುವ ಸಾಹಿತಿ
shettysandeep20@gmail.com

One thought on “ಮರೆಯಾಗದಿರಲಿ ಕರಾವಳಿ ಕಲೆ ಯಕ್ಷಗಾನ

Leave a Reply