ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾವುಂದದ ಸರಕಾರಿ ಪದವಿಪೂರ್ವ ಕಾಲೇಜಿನ ಬಳಿ ನಿರ್ಮಿಸಲು ಉದ್ದೇಶಿಸಿರುವ ಹೆದ್ದಾರಿ ಅಂಡರ್ ಪಾಸ್‌ನಿಂದ ಅನುಕೂಲಕ್ಕಿಂತ ಅನನುಕೂಲವೇ ಅಧಿಕ ಎಂದು ವಾದಿಸುತ್ತಿರುವ ಸಾರ್ವಜನಿಕರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಕುಂದಾಪುರ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ಹಿಂದೆ ಸಮೀಪದ ಪದ್ಮಾವತಿ ದೇವಸ್ಥಾನದಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ಈ ಸ್ಥಳದಲ್ಲಿ ಅಂಡರ್ ಪಾಸ್ ನಿರ್ಮಿಸುವುದರಿಂದ ದೇವಾಲಯಕ್ಕೆ ಬಂದು ಹೋಗುವ ಭಕ್ತರಿಗೆ, ಅನ್ಯ ಸಂಚಾರಿಗಳಿಗೆ ತೀವ್ರ ತೊಂದರೆಯಾಗಲಿದೆ. ಇಲ್ಲಿ ಯಾವುದೇ ಸ್ಥಳೀಯ ರಸ್ತೆ ಹೆದ್ದಾರಿಗೆ ಸೇರುತ್ತಿಲ್ಲ. ಇಲ್ಲಿ ಅಂಡರ್ ಪಾಸ್ ನಿರ್ಮಿಸಿದರೆ ಜನ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ. ಅದರ ಬದಲಾಗಿ ಹೆದ್ದಾರಿ ಇಕ್ಕಡೆಗಳ ಬಡಾಕೆರೆ-ಮರವಂತೆ ಸ್ಥಳೀಯ ರಸ್ತೆಗಳ ಕೂಡುಸ್ಥಳದಲ್ಲಿ ಅಥವಾ ಅರೆಹೊಳೆ ಕ್ರಾಸ್‌ನಲ್ಲಿ ಅದನ್ನು ನಿರ್ಮಿಸಿದರೆ ಜನೋಪಕಾರಿಯಾಗುವುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಸಭೆಯಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಶ್ಯಾಮಲಾ ಕುಂದರ್, ಜಗದೀಶ ಪೂಜಾರಿ, ಮಹೇಂದ್ರಕುಮಾರ್, ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ, ಉಪಾಧ್ಯಕ್ಷೆ ಜಯಂತಿ ಬಿ. ಪುತ್ರನ್, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜಿ. ಡಿ. ಮಸ್ಕಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಶೋಕಕುಮಾರ ಶೆಟ್ಟಿ, ಗ್ರಾಮ ಪಂಚಾಯತ್‌ನ ಬಹುತೇಕ ಸದಸ್ಯರು ಈ ತೀರ್ಮಾನಕ್ಕೆ ಬಂದಿದ್ದರು. ಗ್ರಾಮ ಪಂಚಾಯಿತಿ ಇಲ್ಲಿ ಅಂಡರ್ ಪಾಸ್ ಬೇಡ ಎಂಬ ನಿರ್ಣಯ ಕೈಗೊಂಡಿತ್ತು. ಈ ಬಗ್ಗೆ ಸಂಸದೆ ಶೋಭಾ ಕರಂದ್ಲಾಜೆ ಸಮಕ್ಷಮ ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ಶಂಕರ ಪೂಜಾರಿ, ಹಿಂದೆ ಹೇಳಿದ ಎಲ್ಲ ತಾಲೂಕು ಪಂಚಾಯಿತಿ ಸದಸ್ಯರ, ರೈತಸಂಘದ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ, ಸೇರಿದಂತೆ ಸಾರ್ವಜನಕ ಪ್ರತಿನಿಧಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಸಂಸದೆ ಕೂಡ ಜನರ ವಿರೋಧ ಇರುವೆಡೆ ಪಾಸ್ ನಿರ್ಮಿಸಬಾರದೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಇವುಗಳನ್ನು ಕಡೆಗಣಿಸಿ ಗುತ್ತಿಗೆದಾರರು ಕಾಮಗಾರಿ ನಡೆಸಲು ಮುಂದಾದ ಕಾರಣ ಸಾರ್ವಜನಿಕರು ಪ್ರತಿಭಟನೆ ನಡೆಸಿದರು ಎಂದು ಅಶೋಕಕುಮಾರ ಶೆಟ್ಟಿ ತಿಳಿಸಿದ್ದಾರೆ. ಈ ಸ್ಥಳದಲ್ಲಿ ಅಂಡರ್ ಪಾಸ್ ಬದಲಿಗೆ ಯು ತಿರುವು ನೀಡಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.