ಕುಂದಾಪುರ: ತಾಲೂಕಿನಲ್ಲಿ ಶತಮಾನ ಪೂರೈಸಿದ ಹಲವು ಸರಕಾರಿ ಪ್ರಾಥಮಿಕ ಶಾಲೆಗಳಿವೆ. ಇಂತಹ ಪ್ರತಿಷ್ಠಿತ ಶಾಲೆಗಳಲ್ಲಿ ಕಲಿತ ಸಾವಿರಾರು ಮಂದಿ ಉನ್ನತ ಹುದ್ದೆಗೂ ಏರಿದ್ದಾರೆ. ಇಲ್ಲಿ ನುರಿತ ಅಧ್ಯಾಪಕರೂ ಇದ್ದಾರೆ. ಇಂದು ಭಾಷಾ ಮಾಧ್ಯಮಗಳ ತಾಕಲಾಟ ಏನೇ ಇರಲಿ, ಇಂತಹ ಶಾಲೆಗಳನ್ನು ಉಳಿಸಿಕೊಳ್ಳುವುದು ಆಯಾ ಊರ ವಿದ್ಯಾಭಿಮಾನಿಗಳ ಜವಾಬ್ದಾರಿ. ಶಾಲಾ ವಾತಾವರಣವನ್ನು ಉತ್ತಮಪಡಿಸಿದರೆ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬಹುದು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಹೇಳಿದರು.
ಇಲ್ಲಿಗೆ ಸಮೀಪದ ನೂಜಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘ ಮತ್ತು ಗ್ರಾಮಸ್ಥರ ಆಶ್ರಯದಲ್ಲಿ ನಡೆದ ನಿವೃತ್ತರ ಸಮ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇದೇ ಶಾಲೆಯಲ್ಲಿ ಕಲಿತು, ಅಧ್ಯಾ ಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಗಣಪತಿ ಆರ್. ಮಂಜ ಮತ್ತು ಬೆಳ್ವೆ ಶಂಕರ ಶೆಟ್ಟರನ್ನು ಮುಖ್ಯ ಅತಿಥಿ ವಿದ್ಯಾಂಗ ಉಪ ನಿರ್ದೇಶಕ ದಿವಾಕರ ಶೆಟ್ಟಿ ಸಮ್ಮಾನಿಸಿ ಶುಭ ಹಾರೈಸಿದರು. ಶಾಲೆಯ ಹಳೆ ವಿದ್ಯಾರ್ಥಿ, ಅಧ್ಯಾಪಕ, ಕ್ರೀಡಾ ವೀಕ್ಷಕ ವಿವರಣೆಗಾರ, ರಾಜ್ಯಮಟ್ಟದ ಆಶುಭಾಷಣ ಸ್ಪರ್ಧೆ ಯಲ್ಲಿ ಪ್ರಶಸ್ತಿ ಪುರಸ್ಕೃತ ಪ್ರಕಾಶ್ ಶೆಟ್ಟಿ ಅವರನ್ನು ಇದೇ ಸಂದರ್ಭದಲ್ಲಿ ಸಮ್ಮಾನಿಸಿ, ಗೌರವಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಕವಿತಾ ಮಾತನಾಡಿ, ನೂಜಿ ಶಾಲೆಯ ನಿವೇಶನಕ್ಕೆ ಆವರಣ ಗೋಡೆಯ ಅತ್ಯಾವಶ್ಯಕವಿದ್ದು, ಇಲಾಖೆ, ದಾನಿಗಳು, ಹಳೆ ವಿದ್ಯಾರ್ಥಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭಾಸ್ಕರ ಪೂಜಾರಿ ಸ್ವಾಗತಿಸಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ, ನಿವೃತ್ತ ಮುಖ್ಯೋಪಾಧ್ಯಾಯ ಕೆ.ಎನ್.ಚಂದ್ರಶೇಖರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಗ್ರಾ.ಪಂ. ಸದಸ್ಯ ಭುಜಂಗ ಹೆಗ್ಡೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಬೇಬಿ ಶೆಡ್ತಿ, ನಿವೃತ್ತ ಮುಖ್ಯೋಪಾಧ್ಯಾಯ ಮೋಹನ್ ಶೆಟ್ಟಿ, ಶಂಕರ ಶೆಟ್ಟಿ, ರಾಮಣ್ಣ ಶೆಟ್ಟಿ, ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು. ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸುಧಿಧೀರ್ ಕುಮಾರ್ ಶೆಟ್ಟಿ ವಂದಿಸಿದರು.