ಉಡುಪಿ: ಕಳೆದ 15 ವರ್ಷಗಳಿಂದ ಜೆಡಿಎಸ್‌ನ ಅಧ್ಯಕ್ಷರಾಗಿದ್ದ ಬೆಳಪು ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಪ್ರಾಥಮಿಕ ಸದಸ್ಯನಾಗಿ ಮುಂದುವರಿಯುವುದಾಗಿ ಘೋಷಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅವರು ಈ ನಿರ್ಧಾರ ಪ್ರಕಟಿಸಿದರು. ಪಕ್ಷವನ್ನು ಜಿಲ್ಲೆಯಲ್ಲಿ ತಳಮಟ್ಟದಿಂದ ಸಂಘಟಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಜಿಲ್ಲೆಯಲ್ಲಿ ನಡೆಯುವ ಅನ್ಯಾಯ, ದೌರ್ಜನ್ಯಗಳ ವಿರುದ್ಧ ಹೋರಾಟ, ಜನಪರ ಕಾರ್ಯಗಳಲ್ಲಿ ನಿರಂತರ ತೊಡಗಿಸಿಕೊಂಡಿದ್ದರೂ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ಪೈಪೋಟಿ ನಡುವೆ ಜೆಡಿಎಸ್‌ನಲ್ಲಿ ನಿರೀಕ್ಷಿತ ಬೆಳವಣಿಗೆಯಾಗಿಲ್ಲ ಎಂದು ಒಪ್ಪಿಕೊಂಡರು.
ಪಕ್ಷದ ರಾಜ್ಯ ಘಟಕದಿಂದ ಚುನಾವಣೆ ಸಂದರ್ಭದಲ್ಲಿ ಮತ್ತು ಪಕ್ಷ ಸಂಘಟನೆಗೆ ಯಾವುದೇ ಸಹಕಾರ ಸಿಗದೇ ಹೋದರೂ ಸಿಕ್ಕ ಅವಕಾಶವನ್ನು ದುರುಪಯೋಗ ಪಡಿಸಿಕೊಳ್ಳದೆ, ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಕರ್ತವ್ಯ ನಿರ್ವಹಿಸಿದ್ದೇನೆ. ಜಿಲ್ಲೆಗೆ ಮಾರಕವಾಗಿರುವ ಪಾದೂರು ಪೈಪ್‌ಲೈನ್, ರೈತರ ಜಮೀನು ವಶಪಡಿಸಿಕೊಳ್ಳುವ ಸರಕಾರದ ನೀತಿಗಳ ವಿರುದ್ಧ ಪಕ್ಷಾತೀತವಾಗಿ ಹೋರಾಟ ಸಂಘಟಿಸುವುದಕ್ಕಾಗಿ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಆಹ್ವಾನ ಇದ್ದರೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಆದರೆ ನಾನು ರಾಜಕೀಯ ಸನ್ಯಾಸಿಯಲ್ಲ ಎಂದು ಅವರು ನುಡಿದರು. ಯುಪಿಸಿಎಲ್ ಸಹಿತ ಜಿಲ್ಲೆಯ ಪರಿಸರಕ್ಕೆ ಮಾರಕವಾದ ಹಲವು ಉದ್ದಿಮೆಗಳು ಬಂದಾಗ ಸುಮ್ಮನಿದ್ದು, ಈಗ ಹೋರಾಟ ಮಾಡಲು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದರೆ ಜನ ನಂಬುತ್ತಾರಾ ಎಂಬ ಪ್ರಶ್ನೆಗೆ ಹಿಂದೆಯೂ ಹೋರಾಟ ಮಾಡಿದ್ದೇನೆ. ಮುಂದೆಯೂ ಮಾಡುವುದಾಗಿ ತಿಳಿಸಿದರು.