ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಕರಾವಳಿ ಭಾಗದಿಂದ ಪ್ರತಿನಿತ್ಯ ಬೆಂಗಳೂರಿಗೆ ತೆರಳುವ ನೂರಾರು ಜನರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಗಂಗೊಳ್ಳಿ-ಬೆಂಗಳೂರು ನಡುವೆ ಸ್ಕ್ಯಾನಿಯಾ ಹವಾನಿಯಂತ್ರಿತ ಬಸ್ ಸೇವೆ ಆರಂಭಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ, ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಗಂಗೊಳ್ಳಿ-ಬೆಂಗಳೂರು ನಡುವೆ ಆರಂಭಿಸಿದ ನೂತನ ಸ್ಕ್ಯಾನಿಯಾ ಬಸ್ಸುಗಳಿಗೆ ಗಂಗೊಳ್ಳಿಯ ರಥಬೀದಿ ವಠಾರದಲ್ಲಿ ಚಾಲನೆ ನೀಡಿ ಮಾತನಾಡಿದರು.
ಬೈಂದೂರು-ಬೆಂಗಳೂರು ಮತ್ತು ಗಂಗೊಳ್ಳಿ-ಬೆಂಗಳೂರು ನಡುವೆ ಪ್ರತಿನಿತ್ಯ ಈ ಬಸ್ಸುಗಳು ಸಂಚಾರ ನಡೆಸಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಸ್ಸುಗಳನ್ನು ಈ ಮಾರ್ಗದಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಿಂದ ಆರಂಭಿಸಲು ಚಿಂತನೆ ನಡೆಸಲಾಗಿದೆ. ಪ್ರಯಾಣಿಕರ ಅಗತ್ಯತೆ ಹಾಗೂ ನಾಗರಿಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಐಶರಾಮಿ ಬಸ್ಸುಗಳನ್ನು ಓಡಿಸಲು ಸರಕಾರ ಬದ್ಧವಾಗಿದೆ ಎಂದರು.
ಗಂಗೊಳ್ಳಿ-ಕುಂದಾಪುರ ನಡುವೆ ಮಂಜೂರಾಗಿರುವ ಎರಡು ಸರಕಾರಿ ಬಸ್ಸುಗಳನ್ನು ಓಡಿಸಲು ಕ್ರಮಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶಗಳ ಸಂಪರ್ಕಕ್ಕೆ ಅನುಕೂಲವಾಗುವಂತೆ ಮಿನಿ ಬಸ್ಸುಗಳನ್ನು ಪ್ರಾರಂಭಿಸಲು ಕ್ರಮಕೈಗೊಳ್ಳಲಾಗಿದ್ದು, ಮಿನಿ ಬಸ್ ಬಂದ ಬಳಿಕ ಗಂಗೊಳ್ಳಿ-ಕುಂದಾಪುರ ಹಾಗೂ ಇನ್ನಿತರ ಅವಶ್ಯಕ ಇರುವ ಕಡೆಗಳಿಗೆ ಸರ್ಕಾರಿ ಬಸ್ ಸಂಚಾರ ಆರಂಭಿಸಲು ಸಂಬಂಧಪಟ್ಟ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸರ್ಕಾರಿ ಬಸ್ ವೇಳಾಪಟ್ಟಿ ಬದಲಾವಣೆ ಹಾಗೂ ಖಾಸಗಿ ಬಸ್ಸುಗಳಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಕ್ರಮಕೈಗೊಳ್ಳುವಂತೆ ಅವರು ಈ ಸಂದರ್ಭದಲ್ಲಿ ಸೂಚನೆ ನೀಡಿದರು.
ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ಹೆಗಡೆ, ವಿಭಾಗೀಯ ಸಂಚಲನಾಧಿಕಾರಿ ಜೈಶಾಂತ್ ಕುಮಾರ್, ಜಿಲ್ಲಾ ಕೆಡಿಪಿ ಸದಸ್ಯ ರಾಜು ಪೂಜಾರಿ, ತಾಪಂ ಸದಸ್ಯರಾದ ಸುರೇಂದ್ರ ಖಾರ್ವಿ ಗಂಗೊಳ್ಳಿ, ರಾಜು ದೇವಾಡಿಗ, ಕುಂದಾಪುರ ಘಟಕ ವ್ಯವಸ್ಥಾಪಕ ತಾರಾನಾಥ, ಕೆಎಸ್‌ಆರ್‌ಟಿಸಿ ಅಧಿಕಾರಿಗಳಾದ ಮಂಜುನಾಥ, ಉದಯ ಶೆಟ್ಟಿ, ಪತ್ರಕರ್ತ ಬಿ.ರಾಘವೇಂದ್ರ ಪೈ, ತ್ರಾಸಿ ಗ್ರಾಪಂ ಅಧ್ಯಕ್ಷ ವೆಂಕಟ ಪೂಜಾರಿ, ಗಂಗೊಳ್ಳಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ದುರ್ಗರಾಜ್ ಪೂಜಾರಿ, ಗಂಗೊಳ್ಳಿ ಗ್ರಾಪಂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.