ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಯಕ್ಷಗಾನ ಹಾಸ್ಯ ಕಲಾವಿದ ಹಳ್ಳಾಡಿ ಜಯರಾಮ್ ಶೆಟ್ಟಿಯವರು ಯಕ್ಷರಂಗದಲ್ಲಿ 50 ವರ್ಷಗಳ ಕಾಲ ಸೇವೆ ಸಲ್ಲಿಸಿ ವೃತ್ತಿ ಮೇಳದ ತಿರುಗಾಟದಿಂದ ನಿವೃತ್ತರಾದ ಪ್ರಯುಕ್ತ “ಹಳ್ಳಾಡಿಗೆ 60, ರಂಗಕ್ಕೆ 50′ ಕಾರ್ಯಕ್ರಮ ಕುಂದಾಪುರ ಆರ್.ಎನ್.ಶೆಟ್ಟಿ ಸಭಾಭವನದ ಆವರಣದಲ್ಲಿ ನಡೆಯಿತು.
ಈ ಸಂದರ್ಭ ಯುವ ಬಂಟರ ಸಂಘಟನೆ ಕುಂದಾಪುರ ನೇತೃತ್ವದಲ್ಲಿ, ಹಳ್ಳಾಡಿ ಅಭಿಮಾನಿ ಬಳಗ ಸಾೖಬ್ರಕಟ್ಟೆ, ಅಭಿಮಾನಿ ಬಳಗ ಗಾವಳಿ ಹಾಗೂ ಹಟ್ಟಿಯಂಗಡಿ ಯಕ್ಷಗಾನ ಮೇಳ ಮತ್ತು ಅಭಿಮಾನಿಗಳು, ಹಿತೈಷಿಗಳ ವತಿಯಿಂದ ಹಳ್ಳಾಡಿಯವರನ್ನು ಸಮ್ಮಾನಿಸಿ, ಗೌರವಿಸಲಾಯಿತು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಹಳ್ಳಾಡಿಯವರು, ಯಕ್ಷರಂಗ ತನಗೆ ಎಲ್ಲವನ್ನು ಕೊಟ್ಟಿದೆ. ಜಾತಿ-ಮತ ಭೇದವಿಲ್ಲದೆ ತನಗೆ ಅಭಿಮಾನಿಗಳಿದ್ದಾರೆ. ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಸಮರ್ಪಿಸುವುದಾಗಿ ತಿಳಿಸಿದರು.
ಯಕ್ಷಗಾನ ವಿಮರ್ಶಕ ಎಸ್. ವಿ. ಉದಯ ಕುಮಾರ್ ಶೆಟ್ಟಿ ಮಾತನಾಡಿ, ಯಕ್ಷರಂಗದಲ್ಲಿ 50 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಳ್ಳಾಡಿಯವರಿಗೆ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಲಭಿಸಬೇಕಿದೆ ಎಂದರು.
ಕುಂದಾಪುರ ಯುವಬಂಟರ ಸಂಘದ ಅಧ್ಯಕ್ಷ ಸುಕೇಶ ಶೆಟ್ಟಿ ಹೊಸಮಠ, ಸಾಲಿಗ್ರಾಮ ಮೇಳದ ಯಜಮಾನ ಪಿ. ಕಿಶನ್ ಹೆಗ್ಡೆ, ಬಂಟರ ಸಂಘದ ಸಂಪಿಗೆಹಾಡಿ ಸಂಜೀವ ಶೆಟ್ಟಿ, ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಧರ್ಮದರ್ಶಿ ಕೃಷ್ಣ ಪ್ರಸಾದ್ ಅಡ್ಯಂತಾಯ, ಉದ್ಯಮಿ ಕೃಷ್ಣಮೂರ್ತಿ ಮಂಜ, ಸುಜಯ ಶೆಟ್ಟಿ ತೆಕ್ಕಟ್ಟೆ, ಬೆಳ್ವೆ ಗಣೇಶ ಕಿಣಿ ಹಾಗೂ ಕುಂದಾಪುರ ಯುವ ಬಂಟರ ಸಂಘದ ಸದಸ್ಯರು ಉಪಸ್ಥಿತರಿದ್ದರು.