ಕುಂದಾಪ್ರ ಡಾಟ್ ಕಾಂ ಸುದ್ದಿ
ಸಿದ್ದಾಪುರ: ಏಕಾಗ್ರತೆ ಹಾಗೂ ಆತ್ಮ ಶುದ್ಧಿಯಿಂದ ದೇವರ ಧ್ಯಾನ ಮಾಡಿದಾಗ ಪುಣ್ಯ ಪ್ರಾಪ್ತಿಯಾಗುತ್ತದೆ. ದೇವರ ಧ್ಯಾನದಿಂದ ಸಾರ್ಥಕ ಜೀವನ ಹೊಂದಲು ಸಾಧ್ಯ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಹೇಳಿದರು.
ಅವರು ಬೆಳ್ವೆ ಹೊನ್ಕಲ್ಲು ಚಿತ್ತೇರಿ ಶ್ರೀ ವನದುರ್ಗಾ ದೇವಸ್ಥಾನದ ಪುನಃ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರದ್ಧೆ ಭಕ್ತಿಯ ಧಾರ್ಮಿಕ ಆಚರಣೆಗಳಿಂದ ಧರ್ಮ ಸಂಸ್ಕೃತಿಯ ಉಳಿವಿಗೆ ಸಾಧ್ಯ. ದೇವರ ಭಯವೇ ಜ್ಞಾನದ ಆರಂಭ. ಯುವ ಜನತೆ ಹಿರಿಯರನ್ನು ಗೌರವಿಸುವ ಸೇವಾ ಮನೋಭಾವನೆಗಳನ್ನು ಮೈಗೂಡಿಸಿ ಕೊಳ್ಳಬೇಕು. ದೂರದರ್ಶನ ಕಾರ್ಯ ಕ್ರಮಗಳಿಂದ ಧಾರ್ಮಿಕ ಆಚರಣೆಗಳು ವ್ಯತಿರಿಕ್ತ ಸ್ವರೂಪವನ್ನು ಹೊಂದಿ ಕೊಳ್ಳುತ್ತಿರುವುದು ದುರದೃಷ್ಟಕರ. ಧಾರ್ಮಿಕ ಆಚರಣೆಗಳಲ್ಲಿ ಜನರ ಆಸಕ್ತಿ ಒಗ್ಗೂಡುವಿಕೆಯಿಂದ ಊರಿನ ಅಭಿವೃದ್ಧಿ ಹಾಗೂ ಗೌರವ ಹೆಚ್ಚುತ್ತದೆ. ವ್ಯಕ್ತಿಯ ಉತ್ತಮ ಸೇವಾ ಮನೋಭಾವನೆಯಿಂದ ಸಮಾಜದಲ್ಲಿ ಗೌರವಕ್ಕೆ ಅರ್ಹರಾಗುತ್ತಾರೆ ಎಂದರು.
ನಿವೃತ್ತ ಶಿಕ್ಷಕ ಶೇಖರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಳಗಳು ಹಾಗೂ ಶಾಲೆಗಳು ಊರಿನ ಅಭಿವೃದ್ಧಿಯ ಸಂಕೇತಗಳಾಗಿವೆ. ದೇಗುಲಗಳ ಜೀರ್ಣೋದ್ಧಾರ ಮತ್ತು ಪುನಃ ಪ್ರತಿಷ್ಠೆ ಕಾರ್ಯಗಳ ಅನಂತರ ಧಾರ್ಮಿಕ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಹಾಸ್ಯ ನಟ ಮಂಜುನಾಥ ಕುಂದೇಶ್ವರ, ರಾಧಕೃಷ್ಣ ಮಯ್ಯ ಹೊನ್ಕಲ್ಲು ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮತ್ತು ಹೊನ್ಕಲ್ಲು ರಾಧಾಕೃಷ್ಣ ಮಯ್ಯ ಅವರನ್ನು ಸಮ್ಮಾನಿಸಲಾಯಿತು. ಅನಂತರ ಹಾಸ್ಯ ನಟ ಮಂಜುನಾಥ ಕುಂದೇಶ್ವರ ಅವರಿಂದ ಮಿಮಿಕ್ರಿ ಮತ್ತು ಹಾಸ್ಯ ಚಟಾಕಿ ಕಾರ್ಯಕ್ರಮ ಜರಗಿತು.