ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಗಂಗೊಳ್ಳಿಯ ಆಟೋ ರಿಕ್ಷಾ ಚಾಲಕರ ಬೇಡಿಕೆಗೆ ಅನುಗುಣವಾಗಿ ಮ್ಯಾಂಗೀಸ್ ರಸ್ತೆಯ ವಠಾರದಲ್ಲಿ ತಾಲೂಕು ಪಂಚಾಯತ್ ನಿಧಿಯಿಂದ ಸುಸಜ್ಜಿತವಾದ ಆಟೋ ರಿಕ್ಷಾ ನಿಲ್ದಾಣವನ್ನು ನಿರ್ಮಿಸಲಾಗಿದೆ. ಆಟೋ ರಿಕ್ಷಾ ಚಾಲಕ ಮಾಲಕರು ಈ ತಂಗುದಾಣದ ಸದುಪಯೋಗ ಪಡೆದುಕೊಂಡು ಗಂಗೊಳ್ಳಿ ಜನರಿಗೆ ಉತ್ತಮ ಸೇವೆ ನೀಡುವಂತಾಗಬೇಕು ಎಂದು ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ ಹೇಳಿದರು.
ಅವರು ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯ ವಠಾರದಲ್ಲಿ ತಾಲೂಕು ಪಂಚಾಯತ್ ನಿಧಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಆಟೋ ರಿಕ್ಷಾ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿಕ ಎಂ.ರಾಮಕೃಷ್ಣ ಪೈ ಮುಳ್ಳಿಕಟ್ಟೆ ಮಾತನಾಡಿ, ಆಟೋ ಚಾಲಕರು ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಾಹನ ಚಲಾಯಿಸಬೇಕು. ಅತಿ ವೇಗದಿಂದ ಚಲಾಯಿಸುವುದು, ಡ್ರೈವಿಂಗ್ ಲೈಸನ್ಸ್ ಇಲ್ಲದೆ ವಾಹನ ಚಲಾಯಿಸುವುದನ್ನು ಮಾಡದೇ ತಮ್ಮ ವಾಹನವನ್ನು ಅತ್ಯಂತ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಚಾಲನೆ ಸಂದರ್ಭ ಎಲ್ಲಾ ವಾಹನಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆ ಪತ್ರಗಳನ್ನು ತಮ್ಮೊಟ್ಟಿಗೆ ಇಟ್ಟುಕೊಳ್ಳಬೇಕು ಎಂದರು.
ಪತ್ರಕರ್ತ ಬಿ.ರಾಘವೇಂದ್ರ ಪೈ ಶುಭಾಶಂಸನೆಗೈದರು. ವ್ಯಂಗ್ಯಚಿತ್ರಕಾರ ಜಿ.ಭಾಸ್ಕರ ಕಲೈಕಾರ್, ಆಟೋ ರಿಕ್ಷಾ ಚಾಲಕ ಮಾಲಕರು ಉಪಸ್ಥಿತರಿದ್ದರು. ಆಟೋ ರಿಕ್ಷಾ ಚಾಲಕರದ ಸಂಘದ ಸೂರ್ಯ ಹೆಗ್ದೆ ಸ್ವಾಗತಿಸಿದರು. ಉಮನಾಥ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಅಣ್ಣಪ್ಪ ಖಾರ್ವಿ ಸಹಕರಿಸಿದರು. ನರಸಿಂಹ ದೇವಾಡಿಗ ವಂದಿಸಿದರು.