ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೆಲಸ ಹುಡುಕಿ ಬಂದ ವಲಸೆ ಕಾರ್ಮಿಕರಿಗೆ ಸೂಕ್ತ ವಸತಿ ವ್ಯವಸ್ಥೆ ಕುಂದಾಪುರದ ನೆಹರೂ ಮೈದಾನದಲ್ಲಿ ರಾತ್ರಿ ವಾಸ್ತವ್ಯ ಮಾಡುವ ಅನಿವಾರ್ಯತೆ ಇದ್ದು, ಬೇರೆಡೆ ವಸತಿ ಕಲ್ಪಿಸುವ ಅಗತ್ಯತೆ ಪರಿವಿದೆ. ಈಗಾಗಲೇ ಪುರಸಭೆ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸುವ ಪ್ರಕ್ರಿಯೆ ನಡೆದಿದೆ. ಮಾನವೀಯ ನೆಲೆಯಲ್ಲಿ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸುವುದು ನಮ್ಮ ಕರ್ತವ್ಯ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಸಿ.ಟಿ. ಹೇಳಿದರು.
ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ವಲಸೆ ಕಾರ್ಮಿಕರಿಗೆ ಪುನರ್ವಸತಿ ನಿಮಿತ್ತ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು.
ಕುಂದಾಪುರದಲ್ಲಿ ಉತ್ತರ ಪ್ರದೇಶ, ಬಿಹಾರದಿಂದ ಬಂದಿರುವ ಮರಳು ತೆಗೆಯುವ ಕಾರ್ಮಿಕರು, ರಾಷ್ಟ್ರೀಯ ಹೆದ್ದಾರಿ ಕಾರ್ಮಿಕರು, ನಿರ್ಮಾಣ ಕಾಮಗಾರಿ, ಕೂಲಿ ಕಾರ್ಮಿಕರನ್ನು ಕಾಣಬಹುದು. ಈ ಕಾರ್ಮಿಕರಿಗೆ ಊರಲ್ಲಿ ಕೃಷಿಭೂಮಿ ಇದ್ದರೂ ಕೂಡಾ, ಬರದ ಕಾರಣದಿಂದ ಅನುವಾರ್ಯವಾಗಿ ಇಲ್ಲಿಗೆ ಬಂದಿದ್ದಾರೆ. ಕಾರ್ಮಿಕ ಕಲ್ಯಾಣ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಸ್ಪಷ್ಟ ಮಾಹಿತಿ ಇವರಿಗೆ ಇಲ್ಲ ಎಂದು ಹೇಳಿದರು.
ಕುಂದಾಪುರ ಪುರಸಭೆ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ ಅಧ್ಯಕ್ಷತೆ ವಹಿಸಿ, ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸುವ ಬಗ್ಗೆ ಈಗಾಗಲೆ ಪುರಸಭೆ ನಿರ್ಧಾರ ಮಾಡಿದ್ದು, ಕುಂದಾಪುರದ ಹೊಸ ಬಸ್ ನಿಲ್ದಾಣದ ಬಳಿ ಪುರಸಭೆ ವಾಣಿಜ್ಯ ಸಂಕೀರ್ಣದ ಮೇಲ್ಛಾವಣಿಯಲ್ಲಿ ವಸತಿ ಕಲ್ಪಿಸುವ ಬಗ್ಗೆ ಚಿಂತನೆ ಮಾಡಲಾಗಿದೆ. ಆದರೆ ಇದು ಅಂತಿಮವಲ್ಲ. ಈ ಬಗ್ಗೆ ಎಲ್ಲರ ಅಭಿಪ್ರಾಯ ಕಲೆಹಾಕಿ ಅಂತಿಮ ನಿರ್ಧಾರ ಮಾಡಲಾಗುವುದು ಎಂದರು.
ಬಾರ್ ಅಸೋಸಿಯೇಶನ್ ಅಧ್ಯಕ್ಷ ಸೋಮನಾಥ ಹೆಗ್ಡೆ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಸಿಡಬ್ಲ್ಯುಸಿ ಶ್ರೀನಿವಾಸ ಗಾಣಿಗ, ಪತ್ರಕರ್ತ ಜಾನ್ ಡಿಸೋಜ, ಪುರಸಭೆ ಸದಸ್ಯೆ ಗುಣರತ್ನ, ಪುರಸಭೆ ಉಪಾಧ್ಯಕ್ಷ ರಾಜೇಶ ಕಾವೇರಿ, ಸದಸ್ಯರಾದ ಸತೀಶ್ ಶೆಟ್ಟಿ, ಶ್ರೀಧರ್ ಶೇರುಗಾರ್, ಪುಷ್ಪ ಶೇಟ್, ಚಂದ್ರಶೇಖರ ಖಾರ್ವಿ, ರವಿರಾಜ್ ಖಾರ್ವಿ, ಶಕುಂತಲಾ ಪ್ರಕಾಶ್, ತಾಲೂಕು ವೈದ್ಯಾಧಿಕಾರಿ ಡಾ.ನಾಗಭೂಷಣ ಉಡುಪ, ಜೇಸಿಐ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ಆಶ್ರತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರೇಮಾನಂದ, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಮಾತನಾಡಿದರು. ಪುರಸಭೆ ಸ್ಥಾಯಿ ಸಮಿತಿ ಅಧಕ್ಷೆ ಸಿಸಿಲಿ ಕೋಟ್ಯಾನ್, ನಗರಾಭಿವೃದ್ಧಿ ಪ್ರಾಧಿಕಾರಿ ಅಧ್ಯಕ್ಷ ವಿಕಾಸ್ ಹೆಗ್ಡೆ ಇದ್ದರು.