ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನವೋದಯದ ಪುರುಷ ಎಂದೆನಿಸಿಕೊಂಡಿರುವ ಖ್ಯಾತ ಚಿತ್ರ ಕಲಾವಿದ ಲಿಯೋನಾರ್ಡೋ ಡಾ ವಿಂಚಿ ಅವರ ಜನ್ಮದಿನವನ್ನು ಆಚರಿಸುವ ಮೂಲಕ ಚಿತ್ರಕಲೆಗಿರುವ ಜಾಗತಿಕ ಆಯಾಮ ತೆರೆದಿಡಲಾಗುತ್ತಿದೆ. ಅದ್ಬುತ ಕಲಾಕಾರನನ್ನು ನೆನಪಿಸಿಕೊಳ್ಳುವ ಮೂಲಕ ಚಿತ್ರಕಲೆ ಎಲ್ಲವನ್ನೂ ಮೀರಿದ್ದು ಎಂದು ಹೇಳಹೊರಟಿರುವ ಪ್ರಕ್ರಿಯೆ ವಿಶಿಷ್ಟವಾದುದು ಎಂದು ಹಿರಿಯ ಪತ್ರಕರ್ತ ಎಸ್. ಜನಾರ್ಧನ ಮರವಂತೆ ಹೇಳಿದರು.
ಅವರು ಸುರಭಿ ರಿ. ಬೈಂದೂರು ಸಾರಥ್ಯದಲ್ಲಿ ಚಿತ್ರ ಸುರಭಿ, ರೋಟರಿ ಕ್ಲಬ್ ಬೈಂದೂರು, ಜೆ.ಸಿ.ಐ ಉಪ್ಪುಂದ ಹಾಗೂ ಸೌಜನ್ಯ ರಿ. ಬೈಂದೂರು ಆಶ್ರಯದಲ್ಲಿ ಇಲ್ಲಿನ ವಿಶ್ವ ಚಿತ್ರಕಲಾ ದಿನಾಚರಣೆ ಅಂಗವಾಗಿ ರೋಟರಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲಾ ಪ್ರದರ್ಶನ ಹಾಗೂ ಸ್ವರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಚಿತ್ರಕಲಾವಿದರಾದ ಕೆ.ಬಿ. ಬಡಿಗೇರ್, ಗಿರೀಶ್ ಬೈಂದೂರು ಸುಪ್ರಿತ್ ಆಚಾರ‍್ಯ ಉಪಸ್ಥಿತರಿದ್ದರು. ಭ್ರಮರ ಉಡಪ ಪ್ರಾರ್ಥಿಸಿದರು. ಸೌಜನ್ಯ ರಿ. ಅಧ್ಯಕ್ಷ ಗಣಪತಿ ಹೋಬಳಿದಾರ್ ಸ್ವಾಗತಿಸಿದರು. ಸುರಭಿ ಬೈಂದೂರು ನಿರ್ದೇಶಕ ಸುಧಾಕರ ಪಿ. ಕಾರ್ಯಕ್ರಮ ನಿರೂಪಿಸಿದರು.











