ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಮೇಲ್‌ಗಂಗೊಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಮಂಡಲದ ೩೦ನೇ ವಾರ್ಷಿಕೋತ್ಸವ ಮತ್ತು ಅಮೃತ ಯುವತಿ ಮಂಡಲ ಹಾಗೂ ಅರ್ಚನಾ ಮಹಿಳಾ ಮಂಡಲ ಮೇಲ್‌ಗಂಗೊಳ್ಳಿ ಇವುಗಳ ೨೪ನೇ ವಾರ್ಷಿಕೋತ್ಸವ, ಡಾ.ಬಿ.ಆರ್.ಅಂಬೇಡ್ಕರ್‌ರವರ ೧೨೬ನೇ ಜನ್ಮದಿನಾಚರಣೆ ಕಾರ್ಯಕ್ರಮ ಮೇಲ್‌ಗಂಗೊಳ್ಳಿಯ ಪೋರ್ಟ್ ಬಂಗ್ಲೆ ಮೈದಾನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ಮಾತನಾಡಿ ,ಯುವಕ ಮಂಡಲವು ೩೦ ವರ್ಷಗಳಲ್ಲಿ ಸಾಧಿಸಿದ ಸಾಧನೆ ಅಪಾರವಾದುದು. ಈ ಭಾಗದ ಜನರಿಗೆ ಸಾಕಷ್ಟು ಸವಲತ್ತು ಒದಗಿಸುವಲ್ಲಿ ಶ್ರಮಿಸಿದ್ದಾರೆ ಎಂದರು.
ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಗ್ರಾಪಂ ಸದಸ್ಯೆ ಚಂದು ಶುಭ ಹಾರೈಸಿದರು. ಗಂಗೊಳ್ಳಿಯ ಮತ್ಸ್ಯೋದ್ಯಮಿ ಸಂದೇಶ ಬಹುಮಾನ ವಿತರಿಸಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ಮಾಧವ ಧ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿರುವ ಶಾಸಕ ಕೆ.ಗೋಪಾಲ ಪೂಜಾರಿ, ರಾಜ್ಯ ಮಟ್ಟದ ಪ್ರಶಸ್ತಿ ವಿಜೇತ ಅಂಗನವಾಡಿ ಕಾರ್ಯಕರ್ತೆ ಫಿಲೋಮಿನಾ ಫೆರ್ನಾಂಡಿಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪಬ್ಲಿಕ್ ಟಿವಿ ಕಾರ್ಯಕ್ರಮ ನಿರ್ವಾಹಕ ಗೋಪಿ ಕುಂದಾಪುರ, ರಾಜ್ಯ ಮಟ್ಟದ ಯೋಗಪಟು ಸುದರ್ಶನ ಕೆ. ಹಾಗೂ ಸುದರ್ಶನ ಗಂಗೊಳ್ಳಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮತ್ತು ಬೆಂಗಳೂರಿನ ಕಿಚ್ಚ ಸುದೀಪ್ ಅಭಿಮಾನಿ ಬಳಗದ ಸಹಕಾರದೊಂದಿಗೆ ಆಯ್ಕೆ ಮಾಡಿದ ಗ್ರಾಮಾಂತರ ಪ್ರೌಢಶಾಲೆಯ ೫ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ವಿತರಿಸಲಾಯಿತು. ಇತ್ತೀಚಿಗೆ ನಿಧನರಾದ ಯುವಕ ಮಂಡಲದ ಮಾಜಿ ಅಧ್ಯಕ್ಷ ಎಸ್.ಕೆ.ಪರಮೇಶ್ವರ ಮತ್ತು ಮಹಿಳಾ ಮಂಡಲದ ಮಾಜಿ ಅಧ್ಯಕ್ಷ ಭೂದೇವಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಯುವಕ ಮಂಡಲದ ಅಧ್ಯಕ್ಷ ಪ್ರಸಾದ ಸ್ವಾಗತಿಸಿದರು. ಸ್ಥಾಪಕ ಅಧ್ಯಕ್ಷ ಭಾಸ್ಕರ ಎಚ್.ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಶಶಿದೀಪ ಕೆ. ವರದಿ ವಾಚಿಸಿದರು. ಯುವತಿ ಮಂಡಲದ ಸದಸ್ಯೆ ನಯನ ಸಂದೇಶ ವಾಚಿಸಿದರು. ಗಣೇಶ ಕುಮಾರ್ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ವಿಜೇತ ಕೆ. ವಂದಿಸಿದರು.















