ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಇತ್ತೀಚಿಗೆ ನೂತನವಾಗಿ ರಚನೆಯಾದ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಕೊಲ್ಲೂರು ರಮೇಶ ಗಾಣಿಗರನ್ನು ಅವರ ಕೊಲ್ಲೂರು ನಿವಾಸ ’ಸನ್ನಿಧಿ’ಯಲ್ಲಿ ಗಂಗೊಳ್ಳಿ ಉದ್ಯಮಿ ಜಿ. ಡಿ. ಕೇಶವ ಶೇರುಗಾರ್ ಗೌರವಿಸಿ ಸನ್ಮಾನಿಸಿದರು. ಕೊಲ್ಲೂರು ಶ್ರೀ ಮಹಾಲಕ್ಷ್ಮೀ ರೆಸಿಡೆನ್ಸಿ ಮಾಲಕ ವಿಕ್ರಮ್ ಶೇರುಗಾರ್ ಇದ್ದರು.
ಬಹುಮುಖ ವ್ಯಕ್ತಿತ್ವದ ರಮೇಶ ಗಾಣಿಗ ಇವರು ಪ್ರಮುಖವಾಗಿ ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಈ ಭಾಗದಲ್ಲಿ ಜನಪ್ರೀಯತೆ ಗಳಿಸಿದ್ದಾರೆ. ತಾಲೂಕು ಪಂಚಾಯತ್ ಸದಸ್ಯರಾಗಿ ಕೊಲ್ಲೂರು ಗ್ರಾಮದ ಅಭಿವೃದ್ದಿಗೆ ಅನುದಾನ ಒದಗಿಸುವ ಮೂಲಕ ಮೂಲಸೌಕರ್ಯಕ್ಕೆ ಒತ್ತು ನೀಡಿದ್ದಾರೆ. ಕುಂದಾಪುರ ತಾಲೂಕು ಗಾಣಿಗರ ಸೇವಾ ಸಮಿತಿ ಅಧ್ಯಕ್ಷರಾಗಿ ಸಮುದಾಯದ ಪ್ರಗತಿಗೆ ದುಡಿದಿದ್ದಾರೆ. ತಾಲೂಕು ಅರಣ್ಯ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿಷ್ಠಿತ ಕೊಲ್ಲೂರು ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘದ ನಾಮ ನಿರ್ದೇಶಿತ ಸದಸ್ಯರಾಗಿದ್ದ ಇವರು ಸಹಕಾರ ಕ್ಷೇತ್ರದಲ್ಲಿಯೂ ಕೂಡಾ ತಮ್ಮ ಸಮಾಜದ ಶ್ರೀಗೋಪಾಲಕೃಷ್ಣ ವಿವಿಧೋದ್ದೇಶ ಸಹಕಾರಿ ಸಂಘ ಮತ್ತು ಕೊಡಚಾದ್ರಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ಈ ಪ್ರದೇಶದ ಕೃಷಿಕರಿಗೆ, ಸಣ್ಣುದ್ದಿಮೆದಾರರಿಗೆ ನೆರವಾಗುತ್ತಿದ್ದಾರೆ. ಕಸಾಪ ಸದಸ್ಯರಾಗಿ ಸಾಹಿತ್ಯಿಕ ಮತ್ತು ಸಾಂಸ್ಕೃತಿವಾಗಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ತಮ್ಮದೇ ಆದ ಸುಪರ್ಣ ಚಾರಿಟೇಬಲ್ ಟ್ರಸ್ಟ್ ಮೂಲಕ ಆರೋಗ್ಯ ಹಾಗೂ ಶಿಕ್ಷಣಾರ್ಥಿಗಳಿಗೆ ನೆರವಾಗುತ್ತಿದ್ದಾರೆ. ಇತ್ತೀಚೆಗೆ ಕೊಲ್ಲೂರಿನಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ನೆರವೇರಿಸಿ ಇತಿಹಾಸ ನಿರ್ಮಿಸಿದ ಇವರು ಈಗ ದಕ್ಷಿಣ ಭಾರತದ ಪವಿತ್ರ ಕ್ಷೇತ್ರ ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದು, ಗ್ರಾಮಸ್ಥರಲ್ಲಿ ಸಂಭ್ರಮ ಹೆಚ್ಚಿದೆ.