ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಕೀಲರ ವೃತ್ತಿಗೆ ಹಾಗೂ ವಕೀಲರ ಹಕ್ಕುಗಳಿಗೆ ಚ್ಯುತಿ ತರುವಂತಹ ಅಸಂವಿಧಾನಿಕ ಅಂಶಗಳನ್ನು ವಕೀಲರ ಅಧಿನಿಯಮದಡಿ ತಿದ್ದುಪಡಿ ಮಾಡಲು ಕೇಂದ್ರ ಕಾನೂನು ಆಯೋಗ ಕೇಂದ್ರ ಸರಕಾರಕ್ಕೆ ಶಿಪಾರಸ್ಸು ಮಾಡಿರುವುದನ್ನು ವಿರೋಧಿಸಿ, ಕುಂದಾಪುರ ವಕೀಲರ ಸಂಘದ ಆಶ್ರಯದಲ್ಲಿ ವಕೀಲರು ಪ್ರತಿಭಟನೆ ನಡೆಸಿ ತಿದ್ದುಪಡಿ ವಿಧೇಯಕ ಕರಡುಪ್ರತಿಯನ್ನು ಸುಟ್ಟು ಹಾಕಿದರು.
ಭಾರತೀಯ ವಕೀಲರ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಪ್ರತಿಭಟನೆ ನಡೆಸಲು ಕೋರಿಕೊಂಡ ಮೇರೆಗೆ ಕುಂದಾಪುರ ವಕೀಲರ ಸಂಘದ ಸದಸ್ಯರು ವಕೀಲರ ಸಂಘದ ಎದುರುಗಡೆ ಕಾನೂನು ಸೇವಾ ಆಯೋಗದ ಅಧ್ಯಕ್ಷರ ವಿರುದ್ಧ ಘೋಷಣೆಯನ್ನು ಕೂಗಿ ವಿಧೇಯಕವನ್ನು ತಕ್ಷಣ ಕೈಬಿಡುವಂತೆ ಆಗ್ರಹಿಸಿದರು.
ಭಾರತೀಯ ವಕೀಲರ ಪರಿಷತ್ತು ಎಪ್ರಿಲ್ ೮ ರಂದು ನಡೆಸಿದ ಸಭೆಯಲ್ಲಿ ಕರಡು ಪ್ರತಿಯನ್ನು ಸುಡುವುದರ ಮುಖಾಂತರ ಎಲ್ಲಾ ವಕೀಲರ ಪರಿಷತ್ತುಗಳಿಗೆ ಮನವಿಯನ್ನು ಮಾಡಿದ್ದು, ಆ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮೇ ೧ ರೊಳಗೆ ವಕೀಲರ ತಿದ್ದುಪಡಿ ವಿಧೇಯಕವನ್ನು ಕೈಬಿಡದಿದ್ದರೆ ದೇಶಾದ್ಯಂತ ಎಲ್ಲಾ ವಕೀಲರ ಸಂಘಗಳು ತ್ರೀವ ತರಹದ ಹೋರಾಟವನ್ನು ನಡೆಸಲಿದೆ ಎಂದು ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆಯವರು ತಿಳಿಸಿದರು.
ವಕೀಲರ ಸಂಘದ ಜೊತೆ ಕಾರ್ಯದರ್ಶಿ ಕುಮಾರಿ ಗುಲಾಬಿ, ಖಜಾಂಚಿ ಸಂತೋಷ್ ಆಚಾರ್ ಮತ್ತು ವಕೀಲರ ಸಂಘದ ಸದಸ್ಯರು ಉಪಸ್ಥಿತರಿದ್ದರು.