ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಬಸ್ರೂರು ಮೂರು ಕೈಯಲ್ಲಿರುವ ಕರ್ನಾಟಕ-ರಸ್ತೆ ಸಾರಿಗೆ ಇಲಾಖೆಯ ಕುಂದಾಪುರ ಡಿಪೋದಲ್ಲಿ ಕೆಎಸ್‌ಆರ್‌ಟಿಸಿ ಸಾರ್ವಜನಿಕ ಜನ ಸಂಪರ್ಕ ಸಭೆ ಜರಗಿತು.
ಸಭೆಯಲ್ಲಿ ಸಾರ್ವಜನಿಕರಿಂದ ಅನೇಕ ಬೇಡಿಕೆಗಳು ಹಾಗೂ ಆಗ್ರಹ ಗಳು ಕೇಳಿಬಂದವು. ಕಾವ್ರಾಡಿ – ಕುಂದಾಪುರ ಕರ್ಕುಂಜೆ ಮಾರ್ಗವಾಗಿ ಕೊಲ್ಲೂರಿಗೆ ಗ್ರಾಮಾಂತರ ಸಾರಿಗೆ, ಕುಂದಾಪುರ-ತೀರ್ಥಹಳ್ಳಿ ಮಾರ್ಗವಾಗಿ ಶೃಂಗೇರಿಗೆ ಬಸ್ ಓಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಅಲ್ಲದೇ ಸರಕಾರಿ ಬಸ್ಸುಗಳ ದರ ಹೆಚ್ಚಾಗಿದೆ ಖಾಸಗಿ ಬಸ್ಸುಗಳಿಗಿಂತ ಹೆಚ್ಚು ದರ ನಿಗದಿ ಪಡಿಸುವುದು ಸರಿಯಲ್ಲ ತತ್‌ಕ್ಷಣ ದರವನ್ನು ಪರಿಷ್ಕರಿಸಬೇಕು, ಕುಂದಾಪುರದಿಂದ ಈಗಾಗಲೇ ಓಡುತ್ತಿದ್ದ ವೋಲ್ವೋ ಬಸ್ಸುಗಳು ಬೇರೆ ಕಡೆಗೆ ವರ್ಗಾವಣೆಯಾಗಿದ್ದು ಕೂಡಲೇ ಅವುಗಳನ್ನು ಕುಂದಾಪುರಕ್ಕೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
ಕುಂದಾಪುರ ರೈಲು ನಿಲ್ದಾಣಕ್ಕೆ ಸರಕಾರಿ ಬಸ್ಸು ಸಂಚಾರ ಕಲ್ಪಿಸಬೇಕು ಎನ್ನುವ ಬೇಡಿಕೆ ಇಡಲಾಯಿತು.
ಸಾರ್ವಜನಿಕರ ಬೇಡಿಕೆಗಳ ಆಗ್ರಹಕ್ಕೆ ಉತ್ತರಿಸಿದ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ಅಧಿಕಾರಿ ಜೈಶಾಂತ್ ಕುಮಾರ್ ಈ ಭಾಗದ ಹಲವಾರು ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ. ಸಿದ್ದಾಪುರ – ಆಜ್ರಿ ಮಾರ್ಗವಾಗಿ ಬಸ್ಸು ಓಡಾಟ ಆರಂಭವಾಗಿದೆ. ಗಂಗೊಳ್ಳಿ ಬೈಂದೂರಿನಿಂದ ಬೆಂಗಳೂರಿಗೆ ಸ್ಕ್ಯಾನಿಯಾ ಬಸ್ಸು ಓಡಾಡುತ್ತಿದೆ. ಹೊಸ ಬೇಡಿಕೆಗಳನ್ನು ಗಣನೆಗೆ ತೆಗೆದುಕೊಂಡು ಇನ್ನಷ್ಟು ಉತ್ತಮ ಸೇವೆಯನ್ನು ನೀಡಲಿದ್ದು ಕುಂದಾಪುರ ತಾಲೂಕಿನ ಗ್ರಾಮೀಣ ಭಾಗಗಳಿಗೆ ಅನುಕೂಲವಾಗುವಂತೆ ಸರಕಾರಿ ಬಸ್ಸುಗಳ ಓಡಾಟವನ್ನು ಆರಂಭಿಸಲಾಗಿದೆ ಎಂದರು.
ಈ ಸಂದರ್ಭ ಕುಂದಾಪುರ ಕೆಎಸ್‌ಆರ್‌ಟಿಸಿ ಡಿಪೋ ಮೆನೇಜರ್ ತಾರಾನಾಥ, ಅಧಿಕಾರಿ ಗಜಾನನ ಹಾದಿಮನಿ, ಕುಂದಾಪುರ ರೈಲ್ವೇ ಹಿತ ರಕ್ಷಣಾ ಸಮಿತಿಯ ಸಂಚಾಲಕ ಕೆಂಚನೂರು ಸೋಮಶೇಖರ ಶೆಟ್ಟಿ, ಪದ್ಮನಾಭ ಶೆಣೈ ಮೊದಲಾದವರು ಉಪಸ್ಥಿತರಿದ್ದರು,.
ಸಾರ್ವಜನಿಕರಿಗೆ ಅನುಕೂಲಕರ
ಕುಂದಾಪುರ ಕೆಎಸ್‌ಆರ್‌ಟಿಸಿ ಡಿಪೋಗೆ ಈಗಾಗಲೇ ಹೊಸ ಮಿನಿ ಬಸ್‌ಗಳು ಬಂದಿದ್ದು, ಅವುಗಳನ್ನು ಕುಂದಾಪುರ ನಗರದಲ್ಲಿ ಸಿಟಿ ಬಸ್‌ಗಳಾಗಿ ಓಡಿಸಬೇಕು. ಇದರಿಂದ ನಗರದ ವಿವಿಧ ಭಾಗಗಳಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಅನುಕೂಲಕರವಾಗುತ್ತದೆ. ಎನ್ನುವ ಅಭಿಪ್ರಾಯಗಳು ಸಭೆಯಲ್ಲಿ ನಾಗರಿಕರಿಂದ ಕೇಳಿ ಬಂದವು.