2013 ಕಾಣೆಯಾದ ವ್ಯಕ್ತಿ ಶವವಾಗಿ ಪತ್ತೆ ಪ್ರಕರಣ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಂಡಾರು ಆರ್‌ಟಿಐ ಕಾರ್ಯಕರ್ತ ಕೊಲೆ ಆಪಾಧಿತರ ಕುಂದಾಪುರದ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶ ರಾಜಶೇಖರ ವಿ. ಪಾಟೀಲ್ ಸಾಕ್ಷಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಮುಕ್ತಗೊಳಿಸಿ, ಆದೇಶ ಮಾಡಿದ್ದಾರೆ.
ಜ್ಯೋತಿಸಿ ರಮೇಶ್ ಬಾಯರಿ. ಬಾಯರಿ ಸಂಬಂಧಿ ಸುಬ್ರಮಣ್ಯ ಉಡುಪ. ಬೆಂಗಳೂರು ಉಮೇಶ, ಬನಶಂಕರಿ ಹೊಸಕೆರೆ ಹಳ್ಳಿ ನವೀನ್, ರಾಘವೇಂದ್ರ, ಮೋಹನ್ ಕುಮಾರ್, ರವಿಚಂದ್ರ ಹಾಗೂ ವಿಜಯ ಸಾರಥಿ ಎಂಬವರನ್ನು ಗುರುವಾರ ದೋಷಮುಕ್ತಿಗೊಳಿಸಲಾಗಿದೆ.
ಆರ್.ಟಿ.ಐ. ಕಾರ್ಯಕರ್ತ ವಂಡಾರು ವಾಸುದೇವ ಅಡಿಗೆ ಕೊಲೆಯಾದ ವ್ಯಕ್ತಿ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಅಂದಿನ ಕುಂದಾಪುರ ಡಿಎಸ್ಟಿ ಯಶೋದಾ ಒಂಟಗೋಡಿ ನ್ಯಾಯಾಲಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ೯೬ ಸಾಕ್ಷಿಗಳ ಹೇಳಿಕೆ ಪಡೆಯಲಾಗಿತ್ತು. ಪ್ರಮುಖ ಆರೋಪಿ ರಮೇಶ್ ಬಾಯರಿಗೆ ಎರಡು ವರ್ಷ ಜಾಮೀನು ಕೂಡ ಸಿಕ್ಕದೆ, ಜೈಲು ವಾಸ ಅನುಭವಿಸಿದ್ದರು.
ಪ್ರಕರಣದ ಹಿನ್ನೆಲೆ:
ಆರ್.ಟಿ.ಐ. ಕಾರ್ಯಕರ್ತ ವಾಸುದೇವ ಅಡಿಗ 2013 ಜ.7ರಂದು ನಿಗೂಢವಾಗಿ ಕಾಣೆಯಾಗಿದ್ದರು. ಶಂಕರನಾರಾಯಣ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಜ.12ರಂದು ಚಿಕ್ಕಮಗಳೂರು ಜಿಲ್ಲೆ, ಕಡೂರು ಬಳಿ ಮದಗದಲ್ಲಿ ಅಡಿಗರ ದೇಹ ಪತ್ತೆಯಾಗಿತ್ತು. ಮನೆ ಸಮೀಪದ ಜಾಗವೊಂದರ ಬಗ್ಗೆ ನ್ಯಾಯಾಲಯದಲ್ಲಿ ವಾಸುದೇವ ಅಡಿಗ ಅವರಿಗೆ ಜಯ ಲಭಿಸಿದ್ದರೂ, ರಮೇಶ್ ಬಾಯರಿ ಜಮೀನಿನ ಮೇಲೆ ಹಿಡಿತವಿಟ್ಟುಕೊಂಡಿದ್ದು, ಇದರ ವಿರುದ್ಧ ವಾಸದೇವ ಅಡಿಗ ಅವರು ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸಿದ್ದರು. ಇದೇ ವೈಷಮ್ಯವೇ ಅಡಿಗ ಅವರ ಕೊಲೆಗೆ ಕಾರಣವಾಗಿತ್ತು.
ಅಂದು ನಡೆದಿದ್ದೇನು:
ಅಡಿಗ ಅವರ ಚಲನವಲನದ ಬಗ್ಗೆ ಮಾಹಿತಿ ಪಡೆದಿದ್ದ ಆರು ಮಂದಿ ಕಾರಿನಲ್ಲಿ ಬಂದಿದ್ದ ವ್ಯಕ್ತಿಗಳು ಬೈಕ್‌ನಲ್ಲಿ ಬರುತ್ತಿದ್ದ ಅಡಿಗರ ವಾಹನದಿಂದ ಬೀಳಿಸಿ, ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು, ಪ್ರಜ್ಞೆ ತಪ್ಪಿಸಿ ವಾಹನದ ಸೀಟಿನ ಮಧ್ಯೆ ಹಾಕಿಕೊಂಡು ಕಡೂರು ಸಮೀಪದ ಮದಗಕ್ಕೆ ನೈಲಾನ್ ಹಗ್ಗದಿಂದ ಕತ್ತು ಬಿಗಿದು, ದೇಹಕೆ ತೂಕದ ಕಲ್ಲು ಕಟ್ಟಿ ನೀರಿಗೆ ಎಸೆದಿದ್ದರು.
ಆರೋಪಿಗಳು ಸಿಕ್ಕಿದ್ದು ಹೇಗೆ:
ಕೊಲೆ ಆಪಾದಿತರು ಹಲವು ಬಾರಿ ಕಾರಿನಲ್ಲಿ ವಂಡಾರಿಗೆ ಬಂದಿದ್ದರಿಂದ ಆ ಕಾರನ್ನು ಸಾರ್ವಜನಿಕರು ಗಮನಿಸಿದ್ದರು. ವಾಹನದ ಮೇಲೆ ‘ಕಬ್ಬಾಳಮ್ಮ’ ಎಂದು ಬರೆದಿದ್ದ ಬಗ್ಗೆ ಮತ್ತು ವಾಹನದ ಸಂಖ್ಯೆಯ ಬಗ್ಗೆ ಸಾರ್ವಜನಿಕರು ಕೆಲವು ಮಹತ್ವದ ಮಾಹಿತಿ ನೀಡಿದ್ದರು. ಜನರು ಸಕಾಲಕ್ಕೆ ಈ ಮಾಹಿತಿ ನೀಡಿದ್ದರಿಂದ ವಾಹನವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಲು ಅನುಕೂಲವಾಯಿತು.
ಪ್ರಕರಣದ ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ರವಿಕಿರಣ ಮುರ್ಡೇಶ್ವರ, ವಿಕ್ರಮ್ ಹೆಗ್ಡೆ, ಜಗನಾಥ ಆಳ್ವ ಬೆಂಗಳೂರು, ಸಂಜೀವ ಎ ಉಡುಪಿ, ನರಸಿಂಹ ಹೆಗ್ಡೆ ಮಂಗಳೂರು, ಅಮರ್ ಕುರ್ಯ ವಾದಿಸಿದ್ದರು.
ಹೈಕೋರ್ಟ್ ಮೊರೆ:
ಮಗನ ಕೊಲೆ ಪ್ರಕರಣದಲ್ಲಿ ಆಪಾದಿತರಾದ ಎಲ್ಲರೂ ನಿರ್ದೋಷಿಗಳಾಗಿ ಹೊರಬಂದಿದ್ದು ಈ ತೀರ್ಪನ್ನು ಹೈಕೋರ್ಟಿನಲ್ಲಿ ಪ್ರಶ್ನಿಸುತ್ತೇವೆ. ಅಗತ್ಯಬಿದ್ದರೆ ಸುಪ್ರೀ ಕೋರ್ಟ್ ಮೊರೆಹೋಗಲಾಗುತ್ತದೆ. – ಶೃಂಗೇಶ್ವರಿ ಅಡಿಗ, ಕೊಲೆಯಾದ ವಾಸುದೇವ ಅಡಿಗರ ತಾಯಿ