ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಾತಾ ಮಾಂಟೆಸ್ಸೊರಿಯ ಸಪ್ತ ವಾರ್ಷಿಕ ಸಂಭ್ರಮ ಮತ್ತು ಎಂಡಿಆರ್‌ಟಿ ಸತತ ೪ನೇ ಬಾರಿ ಸದಸ್ಯತ್ವದ ಸಂತಸದೊಂದಿಗೆ ಬಾಲ ಕಲಾವಿದ ಪ್ರಭಾವ್ ಶೆಟ್ಟಿಯ ಏಕವ್ಯಕ್ತಿ ’ಪ್ರಕೃತಿ’ ಚಿತ್ರಕಲಾಕೃತಿ ಪ್ರದರ್ಶನವನ್ನು ಅಂಪಾರಿನ ಹಿಲ್ಕೋಡಿನಲ್ಲಿ ನೂತನವಾಗಿ ನಿರ್ಮಿಸಿರುವ ಗೃಹ ’ಶ್ರೀ’ಯಲ್ಲಿ ನೆರವೇರಿತು. ಬೆಂಗಳೂರಿನ ಎನ್ಸೈನ್ ಇಕ್ಯುಪ್‌ಮೆಂಟ್ಸ್ ಪ್ರೈ. ಲಿ.ನ ಸಂಸ್ಥಾಪಕರು, ಆಡಳಿತ ನಿರ್ದೇಶಕರಾದ ದಿನೇಶ್ ವೈದ್ಯ ಅಂಪಾರು ಉದ್ಘಾಟನೆಗೈದು ಕಲಾಕ್ಷೇತ್ರದ ಅಗಾಧತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಸವ ಜಯಂತಿಯಂದು ನಡೆಯುತ್ತಿರುವ ಗುರುವಂದನಾ ಕಾರ‍್ಯಕ್ರಮವು ಬಸವಣ್ಣನವರ ಅನುಭವ ಮಂಟಪದ ಸಾಕ್ಷಾಯತ್ಕಾರದಂತಿದೆ, ಗೃಹ ಪ್ರವೇಶೋತ್ಸವದಲ್ಲಿ ವಿಭಿನ್ನ ಚಿಂತನೆಯೋದಿಗೆ ಗುರುಸ್ಮರಣೆ ಮಾಡುವ, ತನ್ನ ವಿಮಾ ಗ್ರಾಹಕರನ್ನು ಸತ್ಕರಿಸುವ, ಪ್ರಕೃತಿ ಚಿತ್ರಕಲಾ ಪ್ರದರ್ಶನದೊಂದಿಗೆ ಬಾಲ ಪ್ರತಿಭೆಯನ್ನು ಪ್ರೋತ್ಸಾಹಿಸುವ ಅಭೂತಪೂರ್ವ ಪೋಷಕತ್ವದ ತತ್ವ ಸಾರಿದ್ದು ಪ್ರಕಾಶ್ಚಂದ್ರ ಶೆಟ್ಟಿ ಯವರ ಅನುಭವ ಮಂಟಪವೆಂದು ಕುಂದಾಪುರದ ಖ್ಯಾತ ಪತ್ರಕರ್ತರಾದ ಜಾನ್ ಡಿ’ಸೋಜಾ ನುಡಿದರು.
ಮಾತಾ ಮಾಂಟೆಸ್ಸೊರಿಯ ಸಪ್ತ ವಾರ್ಷಿಕ ಸಂಭ್ರಮ ಮತ್ತು ಎಂಡಿಆರ್‌ಟಿ ಸತತ ೪ನೇ ಬಾರಿ ಸದಸ್ಯತ್ವದ ಸಂತಸ, ಬಾಲ ಕಲಾವಿದ ಪ್ರಭಾವ್ ಶೆಟ್ಟಿಯ ಏಕವ್ಯಕ್ತಿ ’ಪ್ರಕೃತಿ’ ಚಿತ್ರಕಲಾಕೃತಿ ಪ್ರದರ್ಶನ, ಗೃಹ ಪ್ರವೇಶೋತ್ಸವ ಪಂಚ ಕಾರ‍್ಯಕ್ರಮಗಳ ವಿಶಿಷ್ಟ ಮೆರುಗು ಒಂದೇ ವೇದಿಕೆಯಲ್ಲಿ ನಡೆಯುತ್ತಿರುವುದು ಪ್ರಕಾಶ್ಚಂದ್ರ ಶೆಟ್ಟಿಯವರ ಸೂಕ್ಷ್ಮತೆ ಜಾಣ್ಮೆ ಮತ್ತು ಸಜ್ಜನಿಕೆಗೊಂದು ಕೈಗನ್ನಡಿ. ವಿಮಾ ಕ್ಷೇತ್ರದಲ್ಲಿ ಹಂತ ಹಂತವಾಗಿ ಎತ್ತರಕ್ಕೇರುತ್ತಾ ತನ್ನ ಗ್ರಾಹಕರು ಹಾಗು ಗುರು ಹಿರಿಯರಲ್ಲಿ ಗೌರವಪೂರ್ವಕ ಸ್ನೇಹ ಬೆಸೆಯುತ್ತಿರುವುದು ಅವರ ಯಶಸ್ವಿಗೆ ಇನ್ನೊಂದು ಗರಿ., ಬಾಲಪ್ರತಿಭೆಯನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುತ್ತಿರುವುದು ಕಲಾವಿದ ಹರೀಶ್ ಸಾಗಾರವರ ಕಲಾಕೌಶಲ್ಯತೆಗೆ ಕೈಗನ್ನಡಿ ಎಂದು ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ ಶ್ರೀ ಡಾ. ಹೆಚ್. ವಿ. ನರಸಿಂಹಮೂರ್ತಿ ಸಭಾಧ್ಯಕ್ಷತೆಯಲ್ಲಿ ನುಡಿದರು.
ಕುಂದಾಪುರದ ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಭಿವೃದ್ಧಿ ಅಧಿಕಾರಿ ಕೆ. ಕರುಣಾಕರ್ ಶೆಟ್ಟಿ, ಮತ್ತು ಮಣಿಪಾಲ ಕುಂದಾಪುರದ ತ್ರಿವರ್ಣ ಕಲಾ ಮಾರ್ಗದರ್ಶಕರಾದ ಕಲಾವಿದ ಹರೀಶ್ ಸಾಗಾರವರನ್ನು ಶ್ರೀಮತಿ ಗುಲಾಬಿ ವಿ. ಶೆಟ್ಟಿ ಮತ್ತು ನಿವೃತ್ತ ಮುಖ್ಯೋಪಾಧ್ಯಾಯರಾದ ಎಚ್. ವಿಠ್ಠಲ್ ಶಟ್ಟಿ ದಂಪತಿಯವರು ಸನ್ಮಾನಿಸಿದರು. ಉಪ್ಪುಂದ ಶ್ರೀ ಲಕ್ಷ್ಮೀ ಕೃಪಾ ಟ್ರಾನ್ಸ್‌ಪೋರ್ಟ್‌ನ ಎನ್. ದಿವಾಕರ್ ಶೆಟ್ಟಿ,
ಕುಂದಾಪುರ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ರಿಸರ್ವೇಶನ್ ಚಿತ್ರದ ನಿರ್ಮಾಪಕರಾದ ಯಾಕೂಬ್ ಖಾದರ್ ಗುಲ್ವಾಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕುಂದಾಪುರ ರೋಟರಿ ತ್ರಿವರ್ಣ ಕಲಾ ತರಗತಿಯಲ್ಲಿ ಆತನ ಕಲಾ ಪ್ರಖರತೆಯ ಕುಂದಾಪುರದ ಸೂಕ್ಷ್ಮತೆಗೆ ಸಂಬಂಧಿಸಿದ ದೃಶ್ಯಗಳನ್ನು, ತದ್ರೂಪತೆ ಸಾರಬಲ್ಲ ಹಳೆಯ ಮನೆ ಸಲಕರಣೆಗಳನ್ನು, ಸಾಕು ಪ್ರಾಣಿ ಪಕ್ಷಿಗಳನ್ನು, ಮನೆ ಪರಿಸರದ ದೇವಸ್ಥಾನಗಳನ್ನು ಪ್ರಕೃತಿ ರಮಣೀಯ ಸೂಕ್ಷ್ಮತೆಯುಳ್ಳ ಮತ್ತು ಸ್ಥಳೀಯರಿಗೆ ಮನದಟ್ಟಾಗುವ ರೀತಿಯಲ್ಲಿ ೨೫ ಕೃತಿಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಸಾವಿರಕ್ಕೂ ಮಿಕ್ಕಿ ಜನರು ವೀಕ್ಷಣೆಗೈದರು.
ಮುಖ್ಯ ಜೀವವಿಮಾ ಸಲಹೆಗಾರರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಪ್ರಾಸ್ತಾವಿಕವಾಗಿ ಮಾತಾಡಿ, ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಭಾರತಿ ಪ್ರಕಾಶ್ ಶೆಟ್ಟಿ ವಂದಿಸಿದರು. ಬಸ್ರೂರು ಶಾರದಾ ಕಾಲೇಜಿನ ಉಪನ್ಯಾಸಕ ಅಕ್ಷಯ್ ಹೆಗ್ಡೆ ಕಾರ‍್ಯಕ್ರಮ ನಿರೂಪಿಸಿದರು. ಶಕ್ತಿ ಶೆಟ್ಟಿಯವರಿಂದ ನೃತ್ಯ ಕಾರ‍್ಯಕ್ರಮ ನಡೆಯಿತು.