ಚಟ್ಟಿನಾಡ್ ಕೋಳಿ ಗಟ್ಟಿ ಸಾರು ಸಾಮಗ್ರಿ: ಕೋಳಿ 1 ಕೆ.ಜಿ., ಆಲೂಗೆಡ್ಡೆ ಹೆಚ್ಚಿದ್ದು 2, ನವಿಲು ಕೋಸು ಹೆಚ್ಚಿದ್ದು 2, ಸಬ್ಬಸಿಗೆ ಸೊಪ್ಪು ಹೆಚ್ಚಿದ್ದು 1 ಬಟ್ಟಲು, ಮೆಂತ್ಯದ ಸೊಪ್ಪು ಹೆಚ್ಚಿದ್ದು 1 ಬಟ್ಟಲು, ಅರಿಶಿಣ 1 ಟೀ ಸ್ಪೂನ್, ಒಣಮೆಣಸಿನಕಾಯಿ ಪುಡಿ 2 ಟೇಬಲ್ ಸ್ಪೂನ್, ದನಿಯಾ ಪುಡಿ 2 ಟೇಬಲ್ ಸ್ಪೂನ್, ಉಪ್ಪು, ಈರುಳ್ಳಿ ಹೆಚ್ಚಿದ್ದು 3, ಟೊಮೆಟೊ 3 ಹೆಚ್ಚಿದ್ದು. ಮಸಾಲಾ ಪುಡಿ: ಚಕ್ಕೆ 2 ಚೂರು, ಲವಂಗ 6, ಕಲ್ಲು ಹೂವು 4, ಸೋಂಪು 1 ಟೀ ಸ್ಪೂನ್ ಎಲ್ಲವನ್ನೂ ಹುರಿದು ಪುಡಿ ಮಾಡಿ. ವಿಧಾನ: 4 ಟೇಬಲ್ ಸ್ಪೂನ್ ಎಣ್ಣೆ ಬಿಸಿ ಮಾಡಿ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಟೊಮೇಟೊ ಸೇರಿಸಿ ಬಾಡಿಸಿ. ಇದಕ್ಕೆ ಹೆಚ್ಚಿದ ಸೊಪ್ಪುಗಳು, ಅರಿಶಿಣ, ಒಣ ಮೆಣಸಿನಕಾಯಿ ಪುಡಿ, ದನಿಯಾ ಪುಡಿ, ಉಪ್ಪು, ಕೋಳಿ ತುಂಡುಗಳು, 2 ಬಟ್ಟಲು ನೀರು ಸೇರಿಸಿ 2 ವಿಶಲ್ ಕೂಗಿಸಿ. ತಣ್ಣಗಾದ ನಂತರ ಕುಕ್ಕರ್ ತೆಗೆದು ಮಸಾಲಾ ಪುಡಿಯನ್ನು ಸೇರಿಸಿ ಗೊಜ್ಜಿನ ಹದಕ್ಕೆ ಬೇಯಿಸಿ. ಕಡೆಯಲ್ಲಿ ಕೊತ್ತಂಬರಿ ಸೊಪ್ಪು, ಕರಿಬೇವು ಸೇರಿಸಿ.
ಚೆಟ್ಟಿನಾಡ್ ಕೋಳಿ ಫ್ರೈ ಸಾಮಗ್ರಿ: ಕೋಳಿ 1 ಕೆ.ಜಿ., ಕೆಂಪು ಮೆಣಸಿನಕಾಯಿ ಪೇಸ್ಟ್, 2 ಟೇಬಲ್ ಸ್ಪೂನ್, ಶುಂಠಿ ಬೆಳ್ಳುಳ್ಳಿ 2 ಟೇಬಲ್ ಸ್ಪೂನ್, ಅರಿಶಿಣ 1 ಟೀ ಸ್ಪೂನ್, ಉಪ್ಪು, ನಿಂಬೆರಸ, ಕರಿಬೇವು, ಎಣ್ಣೆ ಕರಿಯಲು. ವಿಧಾನ: ಬಟ್ಟಲಿನಲ್ಲಿ ಕೋಳಿ ತುಂಡುಗಳು, ಕೆಂಪು ಮೆಣಸಿನಕಾಯಿಯ ಪೇಸ್ಟ್, ಶುಂಠಿ, ಬೆಳ್ಳುಳ್ಳಿ, ಅರಿಶಿಣ, ದನಿಯಾ ಪುಡಿ, ಉಪ್ಪು, ನಿಂಬೆರಸ, 1 ಟೇಬಲ್ ಸ್ಪೂನ್ ಎಣ್ಣೆ ಸೇರಿಸಿ 1 ಗಂಟೆಯ ಕಾಲ ನೆನೆಸಿ. ಎಣ್ಣೆ ಬಿಸಿ ಮಾಡಿ ಕರಿಬೇವನ್ನು ಎಣ್ಣೆಯಲ್ಲಿ ಕರಿದು ಇಡಿ. ನಂತರ ಅದೇ ಎಣ್ಣೆಯಲ್ಲಿ ಕೋಳಿಯನ್ನು ಗರಿಗರಿ ಆಗುವವರೆಗೂ ಹುರಿಯಿರಿ. ಬಡಿಸುವ ಮುನ್ನ ಹುರಿದ ಕರಿಬೇವಿನಿಂದ ಅಲಂಕರಿಸಿ.
ಚೆಟ್ಟಿನಾಡ್ ಗ್ರಿಲ್ ಕೋಳಿ ಸಾಮಗ್ರಿ : ಕೋಳಿ 1 ಕೆ.ಜಿ. ದಪ್ಪಕ್ಕೆ ತುಂಡು ಮಾಡಿದ್ದು, ಉಪ್ಪು. ಮಸಾಲಾ ಪುಡಿ: ಕರಿ ಕಾಳು ಮೆಣಸು ಪುಡಿ 2 ಟೀ ಸ್ಪೂನ್, ಜೀರಿಗೆ 1/2 ಟೀ ಸ್ಪೂನ್, ಮೆಂತ್ಯ 1/4 ಟೀ ಸ್ಪೂನ್, ಸೋಂಪು 1 ಟೀ ಸ್ಪೂನ್, ಚಕ್ಕೆ 2 ಚೂರು, ಲವಂಗ 4 ಎಲ್ಲವನ್ನೂ ಹುರಿದು ಪುಡಿ ಮಾಡಿ. ವಿಧಾನ: ಮೇಲಿನ ಪುಡಿಗೆ 2 ಟೀ ಸ್ಪೂನ್ ಒಣ ಮೆಣಸಿನಕಾಯಿ ಪುಡಿ, ದನಿಯಾ ಪುಡಿ 1 ಟೀ ಸ್ಪೂನ್ ಎಲ್ಲವನ್ನೂ ಕೋಳಿಗೆ ಸೇರಿಸಿ ಇದಕ್ಕೆ 1 ಟೇಬಲ್ ಸ್ಪೂನ್ ಶುಂಠಿ ಬೆಳ್ಳುಳ್ಳಿ ರುಬ್ಬಿದ್ದು , 1 ಟೇಬಲ್ ಸ್ಪೂನ್ ಎಣ್ಣೆ ಸೇರಿಸಿ 1 ಗಂಟೆ ನೆನೆಸಿ. ನೆನೆಸಿದ ಕೋಳಿ ತುಂಡುಗಳನ್ನು 180 ಡಿಗ್ರಿ ಸಿ ನಲ್ಲಿ 10-15 ನಿಮಿಷಗಳ ಕಾಲ್ ಗ್ರಿಲ್ ಮಾಡಿ. ಬಡಿಸುವ ಮುನ್ನ ಎಣ್ಣೆಯಲ್ಲಿ ಕರಿದ ಕರಿಬೇವು, ಗೋಡಂಬಿಯಿಂದ ಅಲಂಕರಿಸಿ.
ಚೆಟ್ಟಿನಾಡ್ ಚಿಕನ್ ರೋಸ್ಟ್ ಸಾಮಗ್ರಿ: ಕೋಳಿ 1 ಕೆ.ಜಿ. ತುಂಡುಗಳು, ಎಣ್ಣೆ 3 ಟೇಬಲ್ ಸ್ಪೂನ್, ಉಪ್ಪು, ಅರಿಶಿಣ, ಒಣ ಮೆಣಸಿನಕಾಯಿ ಪುಡಿ 2 ಟೀ ಸ್ಪೂನ್, ದನಿಯಾ ಪುಡಿ 1 ಟೀ ಸ್ಪೂನ್, ಈರುಳ್ಳಿ 2 ಹೆಚ್ಚಿದ್ದು, ಎಣ್ಣೆ 2 ಟೇಬಲ್ ಸ್ಪೂನ್, ಕರಿಬೇವು, ಶುಂಠಿ ಬೆಳ್ಳುಳ್ಳಿ ರುಬ್ಬಿದ್ದು 1 ಟೇಬಲ್ ಸ್ಪೂನ್, ಗೋಡಂಬಿ 50 ಗ್ರಾಂ. ಮಸಾಲಾ ಪುಡಿ: ಕರಿ ಕಾಳು ಮೆಣಸು 1 ಟೀ ಸ್ಪೂನ್, ಸೋಂಪು 1 ಟೀ ಸ್ಪೂನ್, ಮೆಂತ್ಯ 1/4 ಟೀ ಸ್ಪೂನ್, ಕಲ್ಲು ಹೂವು 2, ಚಕ್ಕೆ 1, ಲವಂಗ 2 ಹುರಿದು ಪುಡಿ ಮಾಡಿ. ವಿಧಾನ: ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಸೇರಿಸಿ ಬಾಡಿಸಿ. ಇದಕ್ಕೆ ಹೆಚ್ಚಿದ ಟೊಮೆಟೊ, ಕೋಳಿ ತುಂಡುಗಳು, ಒಣ ಮೆಣಸಿನಕಾಯಿ ಪುಡಿ, ದನಿಯಾ ಪುಡಿ, ಅರಿಶಿಣ, ಉಪ್ಪು ಸೇರಿಸಿ 5 ನಿಮಿಷ ಹುರಿಯಿರಿ. ಇದಕ್ಕೆ 1 ಬಟ್ಟಲು ನೀರು ಸೇರಿಸಿ ಕೋಳಿಯನ್ನು ಚೆನ್ನಾಗಿ ರೋಸ್ಟ್ ಮಾಡಿ. ರೋಸ್ಟ್ ಮಾಡಿದ ಕೋಳಿಗೆ ಮಸಾಲಾ ಪುಡಿ, ಕರಿಬೇವು, ಗೋಡಂಬಿಯನ್ನು ಸೇರಿಸಿ ಚೆನ್ನಾಗಿ ರೋಸ್ಟ್ ಮಾಡಿ.
ಟಿಪ್ಸ್ * ಎಲ್ಲಾ ಚೆಟ್ಟಿನಾಡ್ ಖಾದ್ಯಗಳನ್ನು ನಾಟಿ ಕೋಳಿಯಲ್ಲೂ ಮಾಡಬಹುದು. * ಕೋಳಿಯನ್ನು ಗ್ರಿಲ್ ಮಾಡುವಾಗ ಆಗಿಂದಾಗ್ಗೆ ಎಣ್ಣೆಯನ್ನು ಸವರಬೇಕು. * ಕೆಂಪು ಮೆಣಸಿನಕಾಯಿ ಪೇಸ್ಟ್ ಮಾಡುವ ಬಗೆ: ಬ್ಯಾಡಗಿ ಮೆಣಸಿನ ಕಾಯಿಯನ್ನು ನೀರಿನಲ್ಲಿ ಮೆತ್ತಗೆ ಆಗುವವರೆಗೆ ಬೇಯಿಸಿ, ನಂತರ ರುಬ್ಬಿ. * ಚೆಟ್ಟಿನಾಡ್ ಖಾದ್ಯಗಳಿಗೆ ಕರಿಬೇವು, ಸೋಂಪು, ಕಲ್ಲು ಹೂವು ಕಡ್ಡಾಯವಾಗಿ ಬಳಸಬೇಕು. * ಚಟ್ಟಿನಾಡ್ ಕೋಳಿ ಸಾರನ್ನು ದೋಸೆ, ಆಪಂ ಹಾಗೂ ಇಡ್ಲಿಯೊಂದಿಗೆ ಬಡಿಸಿ. * ಚೆಟ್ಟಿನಾಡ್ ಚಿಕನ್‌ನನ್ನು ಸ್ಟಾರ್ಟರ್ ತರಹ ಬಳಸಬಹುದು. * ಚೆಟ್ಟಿನಾಡ್ ಮಸಾಲೆಯನ್ನು ಕಡ್ಡಾಯವಾಗಿ ಹುರಿದು ಪುಡಿ ಮಾಡಬೇಕು.
ವಿಜಯಲಕ್ಷ್ಮಿ ರೆಡ್ಡಿ