ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ದಿಗ್ಗಜರನ್ನು ಗುರುತಿಸಿ ನೀಡಲಾಗುತ್ತಿರುವ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಯು ಬೈಂದೂರಿನ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ದೊರಕಿದೆ. ಪ್ರಸ್ತುತ ಕತಾರಿನಲ್ಲಿ ನೆಲೆಸಿರುವ ಸುಬ್ರಹ್ಮಣ್ಯ ಅವರು ಕನ್ನಡ ನಾಡು ನುಡಿಗಾಗಿ ಸಲ್ಲಿಸಲಾಗುತ್ತಿರುವ ಸೇವೆಯನ್ನು ಗುರುತಿಸಿ ಪ್ರಸಕ್ತ ಸಾಲಿನ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಕತಾರ್‌ನಲ್ಲಿ ಪಸರಿಸುತ್ತಿರುವ ಸುಬ್ರಹ್ಮಣ್ಯ ಅವರು ಕತಾರ್ ಕರ್ನಾಟಕ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕತಾರ್ ಕರ್ನಾಟಕ ಸಂಘದ ಮೂಲಕ ಹತ್ತಾರು ಕನ್ನಡಪರ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
2013-15ನೇ ಸಾಲಿನಲ್ಲಿ ಕರ್ನಾಟಕ ಸಂಘ ಕತಾರಿನ ಸದಸ್ಯತ್ವ ನೋಂದಣಿ ಸಂಚಾಲಕರಾಗಿ, ಕಾರ್ಯಕಾರಣಿ ಸಮಿತಿಯ ಖಜಾಂಜಿಯಾಗಿಯೂ ಸೇವೆ ಸಲ್ಲಿಸಿದ್ದರು. ತಮ್ಮ ಕ್ರೀಯಾಶೀಲ ವ್ಯಕ್ತಿತ್ವ, ಸಮಾಜ ಸೇವೆಯಡೆಗಿನ ನಿರಂತರ ತುಡಿತ ಹಾಗೂ ಅತ್ಯುತ್ತಮ ಸಂಘಟನಾ ಕೌಶಲ್ಯದಿಂದ ಸುಬ್ರಹ್ಮಣ್ಯ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಕತಾರ್ ಕರ್ನಾಟಕ ಸಂಘಕ್ಕೆ ಕನ್ನಡಿಗರನ್ನು ಸದಸ್ಯರನ್ನಾಗಿ ಸೇರಿಸುವಲ್ಲಿ ಹಾಗೂ ಈ ಭಾಗದಲ್ಲಿ ವಿವಿಧ ಸಂಘಟನೆಗಳ ಮೂಲಕ ನಿರಂತರವಾಗಿ ಅತ್ಯುತ್ತಮ ಕಾರ್ಯಕ್ರಮ ಹಾಗೂ ವಿವಿಧ ಸಮಾಜ ಸೇವಾ ಚಟುವಟಿಕೆಗಳನ್ನು ಆಯೋಜಿಸುವಲ್ಲಿಯೂ ಅವರು ಯಶಕಂಡಿದ್ದಾರೆ.
ಬೈಂದೂರು ತಗ್ಗರ್ಸೆಯ ಹೆಬ್ಬಾಗಿಲು ಮನೆ ಗುರುದತ್ತ ಶೇರುಗಾರ್ ಹಾಗೂ ಮುಕಾಂಬು ದಂಪತಿಗಳ ಹಿರಿಯ ಪುತ್ರರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಮಯ್ಯಾಡಿ, ಬೈಂದೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿ, ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಉದ್ಯೋಗಕ್ಕಾಗಿ ಕತಾರ್‌ನಲ್ಲಿ ತೆರಳಿದವರು. ಅಲ್ಲಿನ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿ ಪತ್ನಿ ವನಿತಾ ಸುಬ್ರಹ್ಮಣ್ಯ ಹಾಗೂ ಪುತ್ರ ಪ್ರಥ್ವಿಕ್ ಅವರೊಂದಿಗೆ ಕತಾರಿನಲ್ಲಿ ನೆಲೆಸಿರುವ ಸುಬ್ರಹ್ಮಣ್ಯ ತಮ್ಮ ಸ್ನೇಹಮಯಿ ವ್ಯಕ್ತಿತ್ವ, ಕ್ರೀಯಾಲತೆ ಹಾಗೂ ಬದ್ಧತೆಯ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಅವರಿಗೆ ಪ್ರಸಕ್ತ ಸಾಲಿನ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ದೊರೆತಿರುವುದು ಸ್ನೇಹಿತರು ಹಾಗೂ ಹಿತೈಶಿಗಳಿಗೆ ಸಂತಸ ತಂದಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ /
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೇ 24ರಂದು 42ನೇ ವಾರ್ಷಿಕ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದ ಉದ್ಘಾಟನೆಯನ್ನು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ನೆರವೇರಿಸಿದರು. ಅತಿಥಿಗಳಾಗಿ ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾನಿರ್ದೇಶಕರಾದ ನಾಡೋಜ ಡಾ. ಮಹೇಶ್ ಜೋಶಿ, ಖ್ಯಾತ ಚಲನಚಿತ್ರ ನಿರ್ದೇಶಕ ಸಾಯಿಪ್ರಕಾಶ್, ಆರ್ಯಭಟ ಇಂಟರ್ನ್ಯಾಷನಲ್ ಅಧ್ಯಕ್ಷ ಡಾ. ಹೆಚ್. ಎಲ್. ಎನ್. ರಾವ್ ಮೊದಲಾದವರು ಉಪಸ್ಥಿತರಿದ್ದರು.















