ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಧುರ ಮಧುರವೀ ಮಂಜುಳಗಾನ ಕಾರ್ಯಕ್ರಮದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯ ಪ್ರತಿಭೆಗಳು, ಎಲೆಮರೆಯ ಕಾಯಿಯಂತಿದ್ದವರು ಭಾಗವಹಿಸಿ ಹಾಡಿದ್ದಾರೆ. ಚಂದನ ವಾಹಿನಿಯ ಈ ಕಾರ್ಯಕ್ರಮದ ಮೂಲಕ ಅದೆಷ್ಟೋ ಬೆಳಕಿಗೆ ಬಾರದ ಪ್ರತಿಭೆಗಳು ಮೈಕ್ ಹಿಡಿಯುವಂತಾಗಿದೆ ಎಂದು ಬೆಂಗಳೂರು ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾನಿರ್ದೇಶಕ ಡಾ. ಮಹೇಶ್ ಜೋಶಿ ಹೇಳಿದರು.
ಅವರು ದೂರದರ್ಶನ ಕೇಂದ್ರ ಬೆಂಗಳೂರು, ಬೈಲೂರು ಎಜುಕೇಶನ್ ಟ್ರಸ್ಟ್ ಕುಂದಾಪುರ, ಆಕಾಶವಾಣಿ ಮಂಗಳೂರು, ಇಸಿಆರ್ ಏವಿಏಷನ್ ಅಕಾಡೆಮಿ ಕೋಟೇಶ್ವರ, ಯುವ ಇನ್‌ಫ್ರಾಸ್ಟ್ರಕ್ಚರ್ ಕುಂದಾಪುರ ಆಶ್ರಯದಲ್ಲಿ ಕೋಟೇಶ್ವರ ಯುವ ಮೆರಿಡಿಯನ್ ಕನ್ವೆನ್‌ಶನ್ ಸೆಂಟರ್ ಮಧುರ ಮಧುರವೀ ಮಂಜುಳಗಾನ ಅಂದಿನ ಇಂದಿನ ನಾಯಕ ನಟರ ಖ್ಯಾತ ಹಾಡು ಹಾಗೂ ನೃತ್ಯಾವಳಿಗಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರಾವಳಿಯ ಜನರಲ್ಲಿ ಸೌಹಾರ್ದತೆ ಇದೆ. ಅವರು ಓದುವಂತೆ ಬರೆಯುತ್ತಾರೆ. ಬರೆದಂತೆ ಮಾತನಾಡುತ್ತಾರೆ ಮತ್ತು ಮಾತಿನಂತೆ ನಡೆದುಕೊಳ್ಳುತ್ತಾರೆ ಇದು ಈ ಭಾಗದ ಹೆಚ್ಚುಗಾರಿಕೆ. ಕುಂದಾಪುರ ಜನರ ಪ್ರೀತಿ ನಾಲ್ಕನೇ ಭಾರಿಗೆ ಇಲ್ಲಿಯೇ ಕಾರ್ಯಕ್ರಮ ಆಯೋಜಿಸುವಂತೆ ಮಾಡಿದೆ ಎಂದರು.
ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್, ಪುರಸಭಾ ಅಧ್ಯಕ್ಷೆ ವಸಂತಿ ಮೋಹನ್ ಸಾರಂಗ್, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ, ಕಸಪಾ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉದ್ಯಮಿಗಳಾದ ಸುರೇಶ್ ಬೆಟ್ಟಿನ್, ದಿನೇಶ್ ಕಾಮತ್, ಇಸಿಆರ್ ಟ್ರಸ್ಟ್ ಮಧು, ಕಸಪಾ ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಉಡುಪಿ ತಾಲೂಕು ಕಸಪಾ ಅಧ್ಯಕ್ಷ ವಸಂತಿ ಶೆಟ್ಟಿ ಬ್ರಹ್ಮಾವರ, ಕುಂದಾಪುರ ಮಾತಾ ಆಸ್ಪತ್ರೆ ನಿರ್ದೇಶಕ ಡಾ. ಸತೀಶ್ ಪೂಜಾರಿ, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕ ಎನ್. ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.