ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸರಕಾರಿ ಸೇವೆಯಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿ, ಆಸ್ಪತ್ರೆಯ ಬೆಳವಣಿಗೆಯಲ್ಲಿಯೂ ತಮ್ಮ ಕೊಡುಗೆಯನ್ನು ನೀಡಿದ್ದ ಔಷಧ ವಿತರಕಿ (ಫಾರ್ಮಾಸಿಸ್ಟ್) ಕೆ. ಗೀತಾ ಅವರ ನಿವೃತ್ತಿ ಜೀವನ ಉತ್ತಮವಾಗಿರಲಿ ಎಂದು ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಡಿಗ ಹೇಳಿದರು.
ಅರೆಹೊಳೆ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಸರಕಾರಿ ಆಯುರ್ವೇದ ಆಸ್ಪತ್ರೆ ನಾವುಂದದಲ್ಲಿ ೩೨ ವರ್ಷಗಳ ಕಾಲ ಔಷಧ ವಿತರಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ. ಗೀತಾ ಅವರಿಗೆ ಇಲಾಖೆಯ ವತಿಯಿಂದ ಎರ್ಪಡಿಸಲಾದ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿರುವ ಈ ಆಸ್ಪತ್ರೆಯಿಂದ ಅನೇಕರಿಗೆ ಅನುಕೂಲವಾಗಿದೆ. ಗ್ರಾಪಂದಿಂದ ಆಸ್ಪತ್ರೆಯ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಆದ್ಯತೆಯನ್ನು ನೀಡಲಾಗಿದ್ದು, ಆಸ್ಪತ್ರೆಯ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿನ ವೈದ್ಯರು, ಸಿಬ್ಬಂದಿಗಳು ಉತ್ತಮ ಸೇವೆ ನೀಡುತ್ತಿದ್ದಾರೆ ಎಂದರು.
ನಿವೃತ್ತರಾಗುತ್ತಿರುವ ಕೆ. ಗೀತಾ ಅವರು ತಮಗೆ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ಸರಕಾರಿ ಅಧಿಕಾರಿಗಳಿಗೆ ಎಲ್ಲಿ ಕಠಿಣವಾಗಿರಬೇಕು, ಮೃದುವಾಗಿರಬೇಕು ಎಂದು ತಿಳಿದಿರಬೇಕು. ಸರಕಾರ ಜನತೆಗಾಗಿ ನೀಡಿದ ಸೌಲಭ್ಯವನ್ನು ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ಪ್ರತಿಯೋರ್ವ ಸರಕಾರಿ ನೌಕರನ ಕರ್ತವ್ಯವಾಗಿದೆ. ನಾನು ಸರಕಾರದಿಂದ ಪ್ರತಿಫಲವನ್ನು ಪಡೆದು ಇಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ನನಗೆ ಹಿರಿಯ ಅಧಿಕಾರಿಗಳ, ಜನತೆಯ ಸಹಕಾರ ದೊರೆತಿರುವುದರಿಂದ ಉತ್ತಮ ಸೇವೆ ಮಾಡಲು ಅನುಕೂಲವಾಯಿತು ಎಂದರು. ಈ ಸಂದರ್ಭ ಆಸ್ಪತ್ರೆಯ ಸುಧಾರಣೆಗೆ, ಜನತೆಗೆ ಉತ್ತಮ ಸೇವೆ ನೀಡಲು ಗ್ರಾಮ ಪಂಚಾಯತ್ ನೀಡಿದ ಸಹಕಾರವನ್ನು ಸ್ಮರಿಸಿ, ಊರಿನ ಹಿರಿಯರು, ಗ್ರಾಮಸ್ಥರ ಸಹಕಾರವನ್ನು ಕೂಡಾ ಸ್ಮರಿಸಿದರು.
ನಿವೃತ್ತರ ಸೇವಾ ಕಾರ್ಯದ ಕುರಿತು ಅವರ ಸಾಮಾಜಿಕ ಕಾಳಜಿಯ ಕುರಿತು ಊರಿನ ಪ್ರಮುಖರಾದ ನಾಗೇಶ ಶ್ಯಾನಭಾಗ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ಬಾಡಕರ್ ಮಾತನಾಡಿದರು. ಅಮಾಸೆಬೈಲ್ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಹೇಮಲತಾ, ಯು. ಸೀತಾರಾಮ ಭಟ್ಟ ಉಪಸ್ಥಿತರಿದ್ದರು.
ನಾವುಂದದ ಅರೆಹೊಳೆ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವಿನಯಾ ಸ್ವಾಗತಿಸಿ, ಪ್ರಾಸ್ತಾವಿಸಿದರು. ವೇದಘೋಷದ ಮೂಲಕ ವೆಂಕಟೇಶ ಶಾಸ್ತ್ರಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾಲ್ತೋಡು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವೀಣಾ ಕಾರಂತ್ ನಿರೂಪಿಸಿದರು. ಡಾ. ವಿನಯಾ ವಂದಿಸಿದರು.