ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ : ವಿದ್ಯಾರ್ಥಿ ಜೀವನದಲ್ಲಿ ಶೈಕ್ಷಣಿಕ ದಾಖಲೆ ಒಂದು ಭಾಗವಾಗಿದ್ದು, ವಿದ್ಯಾರ್ಥಿಗಳು ಪಾಠೇತರ ಚಟುವಟಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ತಮ್ಮ ಪ್ರತಿಭೆಯನ್ನು ಬಳಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈಯುವ ಮೂಲಕ ಸಮಾಜಕ್ಕೆ ದಾರಿದೀಪಗಳಾಬೇಕು. ಹಗಲೆಲ್ಲ ಬೆಳಕು ಚೆಲ್ಲುವಂತಾಗಬೇಕು ಎಂದು ಸೇವಾ ಸಂಗಮದ ವಿಶ್ವಸ್ಥ ಕೇಶವರಾಯ ಪ್ರಭು ಹೇಳಿದರು.
ಅವರು ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಗಂಗೊಳ್ಳಿ ಇವರ ಆಶ್ರಯದಲ್ಲಿ ಜರಗಿದ ೨೦೧೬-೧೭ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಸ್ಥಾನಗಳಿಸಿ ಗಂಗೊಳ್ಳಿ ನಿವೇದಿತಾ ಶಿಶು ಮಂದಿರದ ಪ್ರಾಕ್ತನ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಶಿಶು ಮಂದಿರದಲ್ಲಿ ಮಾತಾಜಿಯವರು ಮಕ್ಕಳ ಮಟ್ಟಕ್ಕೆ ಇಳಿದು ನೀಡಿದ ಶಿಕ್ಷಣದಿಂದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವಂತಾಗಿದೆ. ಮಾತಾಜಿಯವರ ಪ್ರರಿಶ್ರಮದ ಫಲ ಹಾಗೂ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ತೋರಿದ ಆಸಕ್ತಿಯಿಂದ ಶಿಶು ಮಂದಿರದ ಪ್ರಾಕ್ತನ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿ ಶುಭ ಹಾರೈಸಿದರು.
ನಿವೇದಿತಾ ಶಿಶು ಮಂದಿರದ ಅಧ್ಯಕ್ಷ ಶ್ರೀನಿವಾಸ ಮೊಗವೀರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರದ ಉದ್ಯಮಿ ದತ್ತಾನಂದ ಗಂಗೊಳ್ಳಿ ಮತ್ತು ಗಂಗೊಳ್ಳಿಯ ಪುರೋಹಿತರಾದ ಜಿ.ನಾರಾಯಣ ವಿಶ್ವನಾಥ ಆಚಾರ್ಯ ಶುಭ ಹಾರೈಸಿದರು. ಇದೇ ಸಂದರ್ಭ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಎಂ. ರಾಧಿಕಾ ಮಾಧವ ಪೈ, ಎಂಟನೇ ರ‍್ಯಾಂಕ್ ಗಳಿಸಿದ ಜಿ.ದಿಶಾ ವಿಶ್ವನಾಥ ಭಟ್, ವಿಶಿಷ್ಟ ಸ್ಥಾನಗಳಿಸಿದ ಜಿ.ವರುಣ್ ವಿಶ್ವನಾಥ ಆಚಾರ್ಯ, ಜಿ.ಅನುಷಾ ನರಸಿಂಹ ನಾಯಕ್ ಮತ್ತು ಎನ್.ಸ್ವಾತಿ ಕೃಷ್ಣಾನಂದ ನಾಯಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಶು ಮಂದಿರದ ಸಂಚಾಲಕ ಡಾ.ಕಾಶೀನಾಥ ಪೈ ಸನ್ಮಾನಿತರನ್ನು ಪರಿಚಯಿಸಿ ಶುಭಾಶಂಸನೆಗೈದರು. ಸಾಹಿತಿ ಕೋ.ಶಿವಾನಂದ ಕಾರಂತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ನಾರಾಯಣ ಇ.ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸವಿತಾ ಯು.ದೇವಾಡಿಗ ವಂದಿಸಿದರು.