ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಒತ್ತಿನಣೆ ಗುಡ್ಡ ಕುಸಿತ ಮುಂದುವರಿದಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯಗೊಂಡಿತ್ತು, ಏಕಮುಖ ಸಂಚಾರ, ದೊಂಬೆ ಹಾಗೂ ಮದ್ದೋಡಿ ಮಾರ್ಗದಲ್ಲಿ ಬದಲಿ ವವಸ್ಥೆ ಕಲ್ಪಿಸಿದರೂ, ಅಲ್ಲಿನ ರಸ್ತೆ ಕಿರಿದಾಗಿರುವುದರಿಂದ ಘನ ವಾಹನಗಳ ಸಂಚಾರಕ್ಕೆ ತೊಡಕ್ಕಾಗಿತ್ತು.
ಹೆದ್ದಾರಿ ಬಂದ್ ಹಿನ್ನೆಲೆಯಲ್ಲಿ ದೊಂಬೆ ಕರಾವಳಿ ಮಾರ್ಗವಾಗಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು, ಕರಾವಳಿ ಪಡಿಯಾರಹಿತ್ಲು ವೀರಮಹಾಸತಿ ದೇವಳದ ಬಳಿ ಸರಕು ತುಂಬಿದ ಲಾರಿಯೊಂದು ರಸ್ತೆಯ ಇಕ್ಕೆಲದಲ್ಲಿ ಕುಸಿದ ಹಿನ್ನೆಲೆಯಲ್ಲಿ ಆ ಮಾರ್ಗದಲ್ಲಿಯೂ ಸುಮಾರು ಒಂದು ತಾಸು ಸಂಚಾರ ವ್ಯತ್ಯಯಗೊಂಡು ವಾಹನ ಸವಾರರು ಪರದಾಡುವಂತಾಯಿತು.
ಸುರಕ್ಷತೆಗೆ ಶಾಸಕರ ಸೂಚನೆ: ವತ್ತಿನಣೆಯಲ್ಲಿನ ಸಂಭಾವ್ಯ ಅಪಾಯದ ಹಿನ್ನೆಲೆಯಲ್ಲಿ ಸಮರ್ಪಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕ ಕೆ. ಗೋಪಾಲ ಪೂಜಾರಿ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸೋಮವಾರ ಇಲ್ಲಿಗೆ ಭೇಟಿನೀಡಿದ ಅವರು ವಾಹನ ಸಂಚಾರ ನಿಯಂತ್ರಣಕ್ಕೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯುಕ್ತಿಗೊಳಿಸಬೇಕು. ಆತಂಕ ದೂರಾಗುವ ವರೆಗೆ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿಯನ್ನು ಸ್ಥಳದಲ್ಲಿ ಇರಿಸಬೇಕು ಎಂದು ಹೇಳಿದ್ದಾರೆ.