ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಮ್ಮ ಸನಾತನ ಧರ್ಮದ ಸಂಪ್ರದಾಯದ ಪ್ರಕಾರ ಎಲ್ಲಾ ವಿದ್ಯೆಗಳು ಓಂಕಾರ ಸ್ವರೂಪಿಯಾದ ಪರಬ್ರಹ್ಮನಿಂದಲೇ ಬಂದವುಗಳು. ಯೋಗಶಾಸ್ತ್ರವು ಇದಕ್ಕೆ ಹೊರತಾಗಿಲ್ಲ. ಈ ಯೋಗವನ್ನು ಸೂತ್ರಗಳ ಮೂಲಕ ಸರಳೀಕರಿಸಿ ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಉದ್ಧಾರವಾಗುವಂತೆ ರಚಿಸಿದ್ದು ಮಹರ್ಷಿ ಪತಂಜಲಿಯವರು. ಅಲ್ಲದೇ ಪತಂಜಲಿ ಯೋಗ ಸೂತ್ರವೇ ಅತ್ಯಂತ ಪ್ರಾಚೀನವಾಗಿದ್ದು, ಪ್ರಾಯೋಗಿಕವಾಗಿದ್ದು ಅಧಿಕೃತವಾಗಿದೆ ಎಂದು ಕುಂದಾಪುರ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಬಿ. ಎಂ. ಸುಕುಮಾರ್ ಶೆಟ್ಟಿ ಹೇಳಿದರು.
ಪತಂಜಲಿ ಯೋಗ ಪೀಠ ಹರಿದ್ವಾರ ಇದರ ತತ್ವಾಧಾರಿತ ಪತಂಜಲಿ ಯೋಗ ಸಮಿತಿ, ಭಾರತ್ ಸ್ವಾಭಿಮಾನ್ ನ್ಯಾಸ್ ಉಡುಪಿ ಜಿಲ್ಲೆ ಮತ್ತು ಪತಂಜಲಿ ಯೋಗ ತರಬೇತಿ ಕೇಂದ್ರ, ಶಿಶುಮಂದಿರ ಬೈಂದೂರು ಇವರ ಆಶ್ರಯದಲ್ಲಿ ಯಡ್ತರೆ ಜೆಎನ್‌ಆರ್ ಕಲಾಮಂದಿರದಲ್ಲಿ ಬುಧವಾರ ನಡೆದ ವಿಶ್ವ ಯೋಗ ದಿನವನ್ನು ಉದ್ಘಾಟಿಸಿ ಮಾತನಾಡಿದರು. ಚಿತ್ತಶುದ್ಧಿಯಿಂದ ಯೋಗ, ವ್ಯಾಯಾಮ, ಪ್ರಾಣಾಯಾಮದಿಂದ ದೇಹದಂಡನೆ ಮಾಡುವುದರ ಮೂಲಕ ಆರೋಗ್ಯವನ್ನು ಸಮತೋಲನವಾಗಿಡಲು ಸಾಧ್ಯ. ಪ್ರಾಚೀನ ಜ್ಞಾನ ಅನುಕರಿಸುತ್ತಾ ಹೋದಂತೆ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಯೋಗಶಿಕ್ಷಕ ನಾಗರಾಜ ರಾವ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಯೋಗಶಿಕ್ಷಣದಲ್ಲಿ ತೊಡಗಿಸಿಕೊಂಡ ನಿವೃತ್ತ ಶಿಕ್ಷಕ ನಾಗರಾಜ ರಾವ್, ಮಂಜುನಾಥ ಬಿಜೂರು, ಹನುಮಂತ ಮಯ್ಯಾಡಿ, ಕೃಷ್ಣ ಟೈಲರ್ ವಿದ್ಯಾನಗರ, ಶೇಖರ ಶೆಟ್ಟಿ ಕಾಲ್ತೋಡು, ಶಂಕರ ದೇವಾಡಿಗ ಬೈಂದೂರು, ಶ್ರೀನಿವಾಸ ಶೆಣೈ, ಮಂಜುನಾಥ ದೇವಾಡಿಗ ಬಂಕೇಶ್ವರ್, ಭಾರತಿ ಮಂಜುನಾಥ ಬಿಜೂರು, ಗುರುದಾಸ್ ತಗ್ಗರ್ಸೆ ಇವರನ್ನು ಸನ್ಮಾನಿಸಲಾಯಿತು.
ಜಿಪಂ ಸದಸ್ಯರಾದ ಕೆ. ಬಾಬು ಶೆಟ್ಟಿ, ಶಂಕರ ಪೂಜಾರಿ, ಗೌರಿ ದೇವಾಡಿಗ, ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಉದ್ಯಮಿ ಜಯಾನಂದ ಹೋಬಳಿದಾರ್, ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ವೃತ್ತ ನಿರೀಕ್ಷಕ ರಾಘವ ಸೀತಾರಾಮ ಪಡೀಲ್, ಹೋಲಿಕ್ರಾಸ್ ಚರ್ಚನ ಧರ್ಮಗುರು ರೆ. ಫಾ. ರೊನಾಲ್ಡ್ ಮಿರಾಂದ, ಕರಾವಳಿ ಕಾವಲುಪಡೆ ಪೋಲೀಸ್ ನಿರೀಕ್ಷಕ ಜಿ. ಎಂ. ನಾಯ್ಕರ್, ವಲಯ ದಸಂಸ ಸಂಚಾಲಕ ನರಸಿಂಹ ಹಳಗೇರಿ, ಯುವಮೋರ್ಚಾ ಅಧ್ಯಕ್ಷ ಶರತ್‌ಕುಮಾರ್ ಶೆಟ್ಟಿ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ, ಶೇಷಯ್ಯ ಬಂಗ್ಲೆಮನೆ ಉಪಸ್ಥಿತರಿದ್ದರು. ಸುರೇಂದ್ರ ಡಿ ಪ್ರಾಸ್ತಾವಿಸಿ, ಗಣಪತಿ ಹೋಬಳಿದಾರ್ ನಿರೂಪಿಸಿದರು. ನಂತರ ಅರಣ್ಯ ಇಲಾಖೆಯ ವತಿಯಿಂದ ಯೋಗ ಶಿಬಿರಾರ್ಥಿಗಳಿಗೆ ಮತ್ತು ಅತಿಥಿಗಳಿಗೆ ತಲಾ ಒಂದೊಂದು ಸಸಿಯನ್ನು ವಿತರಿಸಲಾಯಿತು.