ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ವಿದ್ಯಾರ್ಥಿಗಳು ನಿರಂತರ ಅಧ್ಯಯನ ಪ್ರವೃತ್ತರಾಗಿ ಏಕಾಗ್ರತೆ, ಶಿಸ್ತು, ಕರ್ತವ್ಯಬದ್ಧತೆ ಬೆಳೆಸಿಕೊಳ್ಳಬೇಕು. ಇತ್ತೀಚಿನ ಬಾಹ್ಯ ಆಕರ್ಷಣೆಗೆ ಒಳಗಾಗದೆ ಸ್ಥಿರಚಿತ್ತರಾಗಿ ಅಧ್ಯಯನ ಮಾಡಿ ಯಶಸ್ವಿಯಾಗಿ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸರಕಾರಿ ಕಿರಿಯ ಪ್ರಾಥಮಿಕ (ಹವೇ) ಶಾಲೆಯ ಮುಖ್ಯೋಪಾಧ್ಯಾಯ ರಮೇಶ ಮಹಾಲೆ ಹೇಳಿದರು.
ಅವರು ಮೇಲ್‌ಗಂಗೊಳ್ಳಿ ಬಾವಿಕಟ್ಟೆಯ ಶ್ರೀ ಬಸವೇಶ್ವರ ದೇವಸ್ಥಾನದ ಆಶ್ರಯದಲ್ಲಿ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ಜರಗಿದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಮುಜಾಹೀದ್ ನಾಕುದಾ ಶುಭ ಹಾರೈಸಿದರು. ಇದೇ ಸಂದರ್ಭ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಎಂಟನೇ ರ‍್ಯಾಂಕ್ ಗಳಿಸಿದ ದಿಶಾ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸರಕಾರಿ ಕಿರಿಯ ಪ್ರಾಥಮಿಕ (ಹವೇ) ಶಾಲೆಯ ಸಹಶಿಕ್ಷಕಿ ಲಲಿತಾ, ವಿನುತಾ ವಿ.ಭಟ್, ದೇವಸ್ಥಾನದ ಅಧ್ಯಕ್ಷ ಗಣೇಶ ಕೆಇಬಿ, ಉಪಾಧ್ಯಕ್ಷ ಜಗದೀಶ ಮೇಲ್‌ಗಂಗೊಳ್ಳಿ, ಮಾಜಿ ಅಧ್ಯಕ್ಷ ಮಣಿಕಂಠ, ಜಿ.ಈಶ್ವರ, ಓಂ ಶ್ರೀ ಮಾತೃ ಮಂಡಳಿಯ ಕಾರ್ಯದರ್ಶಿ ನಾಗಶ್ರೀ ಉಪಸ್ಥಿತರಿದ್ದರು.