ಕುಂದಾಪ್ರ ಡಾಟ್ ಕಾಂ ಸುದ್ದಿ.
ಮರವಂತೆ: ಸಂಪನ್ನವಾದ ಶ್ರವಣ ನಕ್ಷತ್ರದ ಶುಭ ಘಳಿಗೆಯಲ್ಲಿ ಕುಂದಾಪುರ ತಾಲೂಕು ನಾಡದೋಣಿ ಮೀನುಗಾರರ ಒಕ್ಕೂಟದ ವತಿಯಿಂದ ಮರವಂತೆಯ ಮಹಾರಾಜಸ್ವಾಮಿ ವರಾಹ ದೇವಸ್ಥಾನದ ಬಳಿಯ ಕಡಲತಡಿಯಲ್ಲಿ ಸಾಂಪ್ರದಾಯಿಕ ಸಮುದ್ರ ಪೂಜೆ ನಡೆಯಿತು. ಮರಳದಂಡೆಯಲ್ಲಿ ಸಮುದ್ರ ದೇವತೆಯ ಲಿಂಗ ರಚಿಸಿ ಅದಕ್ಕೆ ಪೂಜೆ ಸಲ್ಲಿಸಿದ ಬಳಿಕ ಸಮುದ್ರ ಪೂಜೆ ನಡೆಸಿ, ಬುಧವಾರದಿಂದ ಆರಂಭವಾಗುವ ಮೀನುಗಾರಿಕಾ ಋತುವಿನಲ್ಲಿ ಸುರಕ್ಷಿತ ಮತ್ತು ಸಮೃದ್ಧ ಮೀನುಗಾರಿಕೆ ಕರುಣಿಸೆಂಬ ಪ್ರಾರ್ಥನೆಯೊಂದಿಗೆ ಸಮುದ್ರಕ್ಕೆ ಬಾಗಿನ ಸಮರ್ಪಿಸಲಾಯಿತು. ವರಾಹ ದೇವಸ್ಥಾನದ ಅರ್ಚಕ ಪಡುಕೋಣೆ ನರಸಿಂಹ ಅಡಿಗ ಪೂಜಾವಿಧಿಗಳನ್ನು ನೆರವೇರಿಸಿದರು.
ಗಂಗೊಳ್ಳಿ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಮಂಜು ಬಿಲ್ಲವ, ಬೈಂದೂರು ಸಂಘದ ಅಧ್ಯಕ್ಷ ಕೆ. ಎಂ. ಸೋಮಶೇಖರ ಖಾರ್ವಿ ಪೂಜೆಯ ನೇತೃತ್ವ ವಹಿಸಿದ್ದರು. ತಾಲೂಕಿನ ಮೀನುಗಾರ ಪ್ರಮುಖರಾದ ಕಂಚಗೂಡು ಚಂದ್ರ ಖಾರ್ವಿ, ಮೋಹನ ಖಾರ್ವಿ, ರಘುನಾಥ ಪಟೇಲ್, ನಾಗಪ್ಪ ಪಟೇಲ್, ಚೌಕಿ ವಿಠಲದಾಸ್, ಕೇಶವ ಕೊಡೇರಿ, ಉಪ್ಪುಂದ ವೆಂಕಟರಮಣ ಖಾರ್ವಿ, ಗಣೇಶ ಖಾರ್ವಿ, ಅಣ್ಣಯ್ಯ ಖಾರ್ವಿ, ಮರವಂತೆ ಭಾಸ್ಕರ ಖಾರ್ವಿ ಇದ್ದರು.











