ಕುಂದಾಪುರ: ಇಲ್ಲಿನ ಹಂಗ್ಳೂರಿನ ಸಾಗರ್ ಜಾನ್ಸನ್ ತಂಡವು ಪಡುಬಿದ್ರಿಯಲ್ಲಿ ನಡೆದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಸಮರ್ಥ್ ಟ್ರೋಫಿಯೊಂದಿಗೆ ನಗದು ರೂ.1 ಲಕ್ಷ ತನ್ನದಾಗಿಸಿಕೊಂಡಿದೆ.
ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ಭಾನುವಾರ ಮಧ್ಯರಾತ್ರಿ ನಡೆದ 6 ಓವರ್‌ಗಳ ಪಂದ್ಯಾಟದಲ್ಲಿ ಟಾಸ್ ಸೋತ ಎಕೆ ಸ್ಪೋರ್ಟ್ಸ್ 7 ವಿಕೆಟ್ ಕಳಕೊಂಡು 44 ರನ್ ಗಳಿಸಿತು. ಗುರಿ ಬೆನ್ನತ್ತಿದ ಜಾನ್ಸನ್ ತಂಡವು 3.5 ಓವರ್‌ಗಳಲ್ಲಿ 1 ವಿಕೆಟ್ ಕಳಕೊಂಡು ವಿಜಯ ಸಾಧಿಸಿತು.
ಇದಕ್ಕೆ ಮುನ್ನ ನಡೆದ ಸೆಮಿ ಫೈನಲ್‌ಗಳಲ್ಲಿ ಜಾನ್ಸನ್ ತಂಡವು ಸಿಟಿ ಫ್ರೆಂಡ್ಸ್ ಕೊಲ್ನಾಡು ತಂಡ(43/6)ವನ್ನು 10 ವಿಕೆಟ್‌ಗಳಿಂದಲೂ, ಎಕೆ ತಂಡವು(63/3) ಮಾರುತಿ ಹೆಜಮಾಡಿ(30/6)ವನ್ನು 39 ರನ್‌ಗಳಿಂದಲೂ ಸೋಲಿಸಿ ಫೈನಲ್ ಪ್ರವೇಶಿಸಿತ್ತು.
ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠರಾಗಿ ಜಾನ್ಸನ್ ತಂಡದ ಸ್ವಸ್ತಿಕ್ ನಗರ್, ಅತ್ಯುತ್ತಮ ದಾಂಡಿಗರಾಗಿ ಎಕೆ ತಂಡದ ಮನೋಹರ್ ಹಾಗೂ ಅದೇ ತಂಡದ ಗುರುಪ್ರಸಾದ್ ಅತ್ಯುತ್ತಮ ಬೌಲರ್ ಪ್ರಶಸ್ತಿ ಪಡೆದರು.
ಈ ವರ್ಷ ಉದ್ಯಾವರ, ಕಟಪಾಡಿ, ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಗಳಲ್ಲಿ ಪ್ರಶಸ್ತಿ ಗೆದ್ದುದಲ್ಲದೆ, ಮಲ್ಪೆಯಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದ ಸಾಗರ್ ಜಾನ್ಸನ್ ತಂಡವು ಪಡುಬಿದ್ರಿಯಲ್ಲಿ ಉಡುಪಿ ಬಲಿಷ್ಠ ಎಕೆ ಸ್ಪೋರ್ಟ್ಸ್ ತಂಡವನ್ನು ಮಣಿಸಿ ಪ್ರಶಸ್ತಿ ಗಳಿಸಿತು. ದ್ವಿತೀಯ ಸ್ಥಾನಿ ಎ.ಕೆ. ಸ್ಪೋರ್ಟ್ಸ್ ನಗದು ರೂ. 50 ಸಾವಿರ ಪಡೆಯಿತು.