ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ನಾಯ್ಕನಕಟ್ಟೆ ಕೆರ್ಗಾಲ್ ಬಳಿ ಕುಂದಾಪುರ ಭಟ್ಕಳ ಸರಕಾರಿ ಬಸ್ ನಿಲುಗಡೆ ಮಾಡುವಂತೆ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಬೇಡಿಕೆಯಿಟ್ಟಿದ್ದು ಅದರಂತೆ ಕೆಎಸ್‌ಆರ್‌ಟಿಸಿ ಅಧ್ಯಕ್ಷರಾದ ಕೆ. ಗೋಪಾಲ ಪೂಜಾರಿ ಅವರ ಶಿಪಾರಸ್ಸಿನ ಮೇರೆಗೆ ಕೆರ್ಗಾಲಿನಲ್ಲಿ ಇಂದಿನಿಂದ ಬಸ್ ನಿಲುಗಡೆಗೊಳ್ಳಲಿದ್ದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಭಾಗದಲ್ಲಿ ಹಲವಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳುತ್ತಿದ್ದು, ಸರಕಾರಿ ಬಸ್ ಪಾಸ್ ಸೌಲಭ್ಯದಿಂದ ವಂಚಿತರಾಗಿದ್ದರು. ಈ ಸಂಬಂಧ ಸಾರ್ವಜನಿಕರು ಸರಕಾರಿ ಬಸ್ ನಿಲುಗಡೆಗೆ ಬೇಡಿಕೆಯಿಟ್ಟಿದ್ದರು. ಇದಕ್ಕೆ ಸ್ಪಂದಿಸಿದ್ದ ತಾಲೂಕು ಪಂಚಾಯತ್ ಸದಸ್ಯ ಜಗದೀಶ್ ದೇವಾಡಿಗ ಅವರು ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿಯೂ ಈ ವಿಚಾರವನ್ನು ಪ್ರಸ್ತಾಪಿಸಿ ಕುಂದಾಪುರ ಡಿಪೋ ಮ್ಯಾನೆಜರ್ ಅವರ ಗಮನಕ್ಕೆ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷರ ಗಮನಕ್ಕೆ ತಂದಿದ್ದರು.
ಇಂದು ಮೊದಲ ಭಾರಿಗೆ ಬಸ್ ನಿಲುಗಡೆ ಮಾಡಲಾಗಿದ್ದುಸಾರ್ವಜನಿಕರು ಸಂತಸಗೊಂಡಿದ್ದಾರೆ. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯೆ ಗೌರಿ ದೇವಾಡಿಗ, ತಾ.ಪಂ ಸದಸ್ಯ ಜಗದೀಶ ದೇವಾಡಿಗ, ಕೆರ್ಗಾಲ್ ಗ್ರಾಪಂ ಅಧ್ಯಕ್ಷ ಸೋಮ, ಉಪಾಧ್ಯಕ್ಷ ಸುಂದರ ಕೊಠಾರಿ, ಗ್ರಾಪಂ ಸದಸ್ಯರು ಜೊತೆಗಿದ್ದರು.