ಕುಂದಾಪ್ರ ಡಾಟ್ ಕಾಂ ಸುದ್ದಿ.
ಬಹ್ಮಾವರ: ರಾಜಕಾರಣದಲ್ಲಿರುವವರು ದಿನ ನಿತ್ಯ ಹಣ ನೀಡುತ್ತಾರೆ ಎಂದರೆ ಆ ಹಣದ ಮೂಲ ಯಾವುದು ಎನ್ನುವ ಪ್ರಶ್ನೆ ಮಾಡುವ ಮನೋಭಾವವನ್ನು ಜನತೆ ಮಾಡದಿದ್ದರೆ ಆಗ ಉತ್ತಮ ಜನಪ್ರತಿನಿಧಿಯ ಆಯ್ಕೆ ಸಾಧ್ಯವಿಲ್ಲ. ನೇರ ನಿಷ್ಠುರವಾಗಿ ಬರೆಯುವ ಪತ್ರಕರ್ತರು ಇದ್ದರು ಕೂಡ ಇಂದು ಜನಪರ ಸುದ್ದಿ ಕಳುಹಿಸಿದರು ಕೂಡ ಡೆಸ್ಕ್‌ನಲ್ಲಿ ಬದಲಾವಣೆಯಾಗಿ ಪ್ರಕಟಗೊಳ್ಳುವ ಸಾಧ್ಯತೆಗಳಿವೆ. ಆದ್ದರಿಂದ ಪತ್ರಕರ್ತರ ಜೊತೆಗೆ ಜನತೆಯು ಕೂಡ ಬದಲಾವಣೆ ಬಯಸಿದ್ದಲ್ಲಿ ಮಾತ್ರ ವ್ಯವಸ್ಥೆ ಸರಿಯಾಗಲಿದೆ ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
ಅವರು ಬ್ರಹ್ಮಾವರ ಬಂಟರ ಭವನದಲ್ಲಿ ಬ್ರಹ್ಮಾವರ ಪ್ರೆಸ್ ಕ್ಲಬ್ ವತಿಯಿಂದ ನೀಡಲಾಗುವ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ಆಯೋಜಿಸಲಾದ ಪತ್ರಿಕೋದ್ಯಮ ರಾಜಕೀಯ ಕಾನೂನು ವಿಷಯಾಧಾರಿತ ಪತ್ರಿಕೋದ್ಯಮ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪತ್ರಕರ್ತ, ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಬ್ರಹ್ಮಾವರ ಪ್ರೆಸ್ ಕ್ಲಬ್ ಸದಸ್ಯರು ರಾಜ್ಯ ಕಂಡ ಅಪ್ರತಿಮ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಅವರನ್ನು ನೆನಪಿಸುವ ನಿಟ್ಟಿನಲ್ಲಿ ಆಯೋಜಿಸಿರುವುದ ಶ್ಗಾಘನಾರ್ಹ. ಇಂದು ನಿಷ್ಟೂರವಾಗಿ ವರದಿಗಳನ್ನು ಮಾಡುತ್ತಿರುವುದು ನಗರದ ಏಸಿ ಕೋಣೆಯಲ್ಲಿ ಕುಳಿತುಕೊಂಡಿರುವ ವರದಿಗಾರರಲ್ಲ, ಬದಲಿಗೆ ಗ್ರಾಮೀಣ ಪ್ರದೇಶದಲ್ಲಿ ವರದಿಗಾರಿಕೆಯನ್ನು ಮಾಡಿಕೊಂಡಿರುವ ಗ್ರಾಮೀಣ ಪತ್ರಕರ್ತರು ಎನ್ನಬಹುದು. ರಾಜಕಾರಣಿಗಳು ಎಂದರೆ ಒಂದು ರೀತಿಯಲ್ಲಿ ನೋಡುವ ಈ ಕಾಲದಲ್ಲಿ ಕಾನೂನು ಕಾಯಿದೆಯನ್ನು ಸುವ್ಯವಸ್ಥೆಯಲ್ಲಿರಿಸಿರುವುದು ರಾಜಕಾರಣಿಗಳು ಎನ್ನುವುದನ್ನು ನಾವು ಮರೆಯಬಾರದು. ಸದ್ಯ ಪರಿಸ್ಥಿತಿಯಲ್ಲಿ ಪತ್ರಿಕೋದ್ಯಮ ರಾಜಕೀಯ ಮತ್ತು ಕಾನೂನು ಸಮತೋಲನ ಕಾಪಾಡಿಕೊಳ್ಳಬೇಕಾದ ಅಗತ್ಯತೆ ಇದೆ ಎಂದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು. ಬ್ರಹ್ಮಾವರ ಪ್ರೆಸ್ ಕ್ಲಬ್ ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ ಸ್ವಾಗತಿಸಿದರು. ಚಿಂತಕ ಜ್ಞಾನ ವಸಂತ್ ಶೆಟ್ಟಿ ಪ್ರಸ್ತಾವಿಸಿದರು. ಕ್ಲಬ್‌ನ ಶೇಷಗಿರಿ ಭಟ್ ಕಾರ್ಯಕ್ರಮ ನಿರೂಪಿಸಿದರು.