ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ನಾವುಂದ ಗ್ರಾಮದ ಪಡುವಾಯಿನ ಮನೆ ಎಂಬಲ್ಲಿ ಒಬ್ಬಂಟಿಯಾಗಿ ನೆಲೆಸಿದ್ದ ಮಾಧವ ಪೂಜಾರಿ (62) ಎಂಬುವವರನ್ನು ಹಣ ಹಾಗೂ ಚಿನ್ನದ ಆಸೆಗೆ ಕಡಿದು ಕೊಲೆಗೈದು ಬಂಧಿತನಾಗಿದ್ದ ನರಸಿಂಹ ನಾಯ್ಕ್ (47) ಎಂಬಾತನಿಗೆ ಇಂದು ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಪ್ರಕಾಶ್ ಕೆ. ಅವರು ಕೊಲೆ ಆರೋಪಿಗೆ ಕೊನೆಯುಸಿರಿರುವ ತನಕ ಜೀವಾವಧಿ ಶಿಕ್ಷೆ ಹಾಗೂ 80 ಸಾವಿರ ರೂ. ದಂಡ ವಿಧಿಸಿದೆ.
2016 ಮಾಚ್ 19ರಂದು ಒಬ್ಬಂಟಿಯಾಗಿ ವಾಸಿಸುತ್ತಿದ್ದ ಮಾಧವ ಪೂಜಾರಿ ಅವರನ್ನು ಕೊಲೆಗೈದಿದ್ದ ನರಸಿಂಹ ನಾಯ್ಕ್ ಎಂಬುವವನನ್ನು ಪೊಲೀಸರು ಮೂರು ದಿನದಲ್ಲಿ ಬಂಧಿಸಿದ್ದರು. ಕೊಲೆ ಮಾಡಲು ಬಳಸಿದ್ದ ಕತ್ತಿ ಹಾಗೂ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಆತನ ಮುಖದ ಮೇಲಿದ್ದ ಗಾಯದ ಗುರುತು, ಕತ್ತಿನಲ್ಲಿದ್ದ ರಕ್ತದ ಕಲೆ ಮಾದರಿ ಹಾಗೂ ಬನಿಯಾನ್‌ನಲ್ಲಿದ್ದ ಮೃತ ವ್ಯಕ್ತಿಯ ರಕ್ತದ ಕಲೆ ಪ್ರಕರಣಕ್ಕೆ ಪೂರಕ ಸಾಕ್ಷ್ಯ ಒದಗಿಸಿದ್ದವು. ಈ ಹಿಂದೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದ್ದರಿಂದ ಒಂದೂವರೆ ವರ್ಷದ ತನಕವೂ ನರಸಿಂಹ ನಾಯ್ಕ್ ಜೈಲಿನಲ್ಲಿಯೇ ಬಂಧಿತನಾಗಿದ್ದ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಅಂದು ಆಗಿದ್ದೇನು?
ನಾವುಂದ ಪಡುವಾಯಿನ ಮನೆ ಎಂಬಲ್ಲಿ ಒಬ್ಬಂಟಿಯಾಗಿ ನೆಲೆಸಿದ್ದ ಮಾಧವ ಪೂಜಾರಿ ಎಂಬುವವರು ಮೈಸೂರಿನಿಂದ ಮಗಳು ಬರುವ ವೇಳೆಗೆ ಮನೆಯಲ್ಲಿಯೇ ಕೊಲೆಯಾಗಿ ಬಿದ್ದಿದ್ದರು. ಈ ಆಘಾತಕಾರಿ ಪ್ರಕರಣದಿಂದಾಗಿ ಜನತೆಗೆ ನಡುಕ ಹುಟ್ಟಿಸಿದ್ದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಅಧಿಕಾರಿಗಳು ಮೂರು ದಿನದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದು ರಾತ್ರಿ 9:30ರ ಸುಮಾರಿಗೆ ಮಾಧವ ಪೂಜಾರಿ ಮನೆಗೆ ತೆರಳಿದ್ದ ಆರೋಪಿ ಹಣಕ್ಕಾಗಿ ಅವರ ಹಲ್ಲೆ ನಡೆಸಿದ್ದಾರೆ. ಹೊಡೆತದಿಂದ ನೆಲಕ್ಕುರುಳಿತ ಅವರನ್ನು ಕತ್ತಿಯಿಂದ ಕಡಿದು ಬಳಿಕ ಹಣ, ಒಡವೆಗಾಗಿ ಮನೆಯನ್ನು ತಡಕಾಡಿದ್ದಾನೆ. ಕೊನೆಗೆ ಏನೂ ಸಿಗದಿದ್ದಾಗ, ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ಉಂಗುರ ಹಾಗೂ ಒಂದಿಷ್ಟು ಚಿಲ್ಲರೆ ಹಣವನ್ನು ತೆಗೆದುಕೊಂಡು, ಮೊಬೈಲ್, ವಾಚ್‌ಗಳನ್ನು ಮನೆಯ ಹತ್ತಿರವೇ ಹೂತಿಟ್ಟು ಬಳಿಕ ಎದುರಿನ ಬಾಗಿಲಿಗೆ ಬೀಗ ಜಡಿದಿದ್ದಾನೆ. ಬೀಗದ ಕೈಯನ್ನು ಒಳಗಿನಿಂದ ತಂದಿದ್ದ ಪರ್ಸ್ ಒಳಗೆ ಹಾಕಿ ಬಾವಿಗೆ ಎಸೆದು, ತನ್ನ ರಕ್ತಸಿಕ್ತ ಅಂಗಿಯನ್ನು ಅಲ್ಲಿಯೇ ನೀರಿನಲ್ಲಿ ತೊಳೆದುಕೊಂಡು ಮನೆಗೆ ತೆರಳಿದ್ದಾನೆ. ಪ್ರಕರಣದ ಹಾದಿ ತಪ್ಪಿಸುವ ಸಲುವಾಗಿ ಎಣ್ಣೆಯನ್ನು ಚಲ್ಲಿ ಹೋಗಿದ್ದ. ಕುಂದಾಪ್ರ ಡಾಟ್ ಕಾಂ ಸುದ್ದಿ
ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?
ಮೂಲತಃ ಸಿರಸಿಯವನಾದ ನರಸಿಂಹ ನಾವುಂದದ ಹೆಂಡತಿ ಮನೆಯಲ್ಲಿಯೇ ವಾಸವಿದ್ದು, ಕೆಲಸಕಾರ್ಯವಿಲ್ಲದೇ ತಿರುಗಾಡುತ್ತಿದ್ದ. ಹಾಗಾಗಿ ಒಬ್ಬಂಟಿಯಾಗಿದ್ದ ಮಾಧವ ಪೂಜಾರಿ ಅವರಿಂದ ಹಣ ಎಗರಾಯಿಸಬಹುದು ಎಂಬ ಆಲೋಚನೆಯಿಂದ ರಾತ್ರಿ ಅವರ ಮನೆಗೆ ತೆರಳಿ ಈ ಕುಕೃತ್ಯ ಎಸಗಿದ್ದಾನೆ, ಮಾಧವ ಪೂಜಾರಿ ಅವರ ಮೇಲೆ ಹಲ್ಲೆಮಾಡಲು ಹೋದಾಗ ನರಸಿಂಹನ ಮುಖದ ಹಾಗೂ ಮೈಮೇಲೆ ಉಗುರಿನಿಂದ ಪರಚಿದ್ದ ಗಾಯವಾಗಿತ್ತು. ಇದನ್ನು ಗಮನಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ನರಸಿಂಹನ ಹೇಳಿಗೆಗೂ ಹಾಗೂ ಅವರ ಮನೆಯವರ ಹೇಳಿಕೆಗೂ ವ್ಯತ್ಯಾಸ ಕಂಡುಬಂದಿತ್ತು. ಅದಲೇ ಸಂಶಯ ಬಲಗೊಂಡದ್ದರಿಂದ ತೀವ್ರ ವಿಚಾರಣೆಗೊಳಪಡಿಸಿದಾಗ ಆರೋಪಿ ಸತ್ಯ ಒಪ್ಪಿಕೊಂಡಿದ್ದ.
ಇದನ್ನೂ ಓದಿ:
► ನಾವುಂದ: ಮಾರಕಾಯುಧಗಳಿಂದ ಹೊಡೆದು ವ್ಯಕ್ತಿಯ ಕೊಲೆ – http://kundapraa.com/?p=12283
► ಹಣ, ಚಿನ್ನಕ್ಕಾಗಿ ಸಂಬಂಧಿಯ ಕೊಲೆ. ಆರೋಪಿ ನರಸಿಂಹ ನಾಯ್ಕ್ ಬಂಧನ – http://kundapraa.com/?p=12335