ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಅನೇಕ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಲ್ಲದೇ, ಮಹಾನ್ ಚೇತನರುಗಳು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅವರ ಸೈದ್ಧಾಂತಿಕ ನಿಲುವುಗಳು ಅವರು ಕಟ್ಟಿಕೊಟ್ಟ ಆದರ್ಶಯುತ ತತ್ವಗಳು ಅಲ್ಲದೇ, ನಮ್ಮ ಸುಧೀರ್ಘ ಪರಂಪರೆಯ ಮೌಲ್ಯಗಳು ಇಂದಿನ ಪೀಳಿಗೆಯ ಯುವಕರಿಗೆ ಮಾರ್ಗದರ್ಶಕಗಳಾಗಬೇಕು. ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಕೇವಲ ಒಂದು ದಿವಸದ ಹಬ್ಬವಾಗಿರದೇ, ಅದರ ನಿರಂತರ ಮೌಲ್ಯಗಳು ನಮಗೆಲ್ಲರಿಗೂ ಪ್ರೇರಣೆಯಾಗಬೇಕು ಎಂದು ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಧ್ವಜರೋಹಣ ಮಾಡಿದ ಶ್ರೀಮಾತಾ ಹಾಸ್ಪಿಟಲ್‌ನ ಖ್ಯಾತ ಮನೋತಜ್ಞರಾದ ಡಾ. ಪ್ರಕಾಶ್ ತೋಳಾರ್ ತಮ್ಮ ಮಾತುಗಳಿಂದ ಶಾಲೆಯ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯನ್ನು ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಧ್ವಜರೋಹಣದ ಜೊತೆಗೆ ವಿವಿಧ ಕವಾಯತುಗಳಾದ ಮಾರ್ಚ್ ಪಾಸ್ಟ್ , ಮಾಸ್ ಡ್ರಿಲ್ , ಪಿರಮಿಡ್ ಮತ್ತು ಕರಾಟೆ ಪ್ರದರ್ಶನಗಳು ನಡೆಯಿತು. ಅಲ್ಲದೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲೆಯ ತಂಡಗಳಾದ ರಾಮನ್, ಕಲ್ಪನಾ, ಆರ್ಯಭಟ ಮತ್ತು ಕಲಾಮ್ ಗಳ ನಡುವೆ ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಐಕ್ಯತೆಯನ್ನು ಸಾರುವ ವಂದೇಮಾತರಂ ಗೀತೆಯ ಸ್ಪರ್ಧೆಗಳು ನಡೆದವು. ಈ ಅರ್ಥಪೂರ್ಣ ಕಾರ್ರಕ್ರಮದಲ್ಲಿ ಶಾಲೆಯ ಜಂಟಿ ಕಾರ್ಯನಿರ್ವಾಹಕರುಗಳಾದ ಸುಭಾಶ್ಚಂದ್ರ ಶೆಟ್ಟಿ ಮತ್ತು ಅನುಪಮ. ಎಸ್.ಶೆಟ್ಟಿ ಹಾಜರಿದ್ದರಲ್ಲದೇ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿದರು. ಈ ಕಾರ್ಯಕ್ರಮದಲ್ಲಿ ಗುರುಕುಲ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಸಾಯಿಜು. ಕೆ.ಆರ್.ನಾಯರ್ ಹಾಗೂ ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಫಾದರ್.ಸನ್ನಿ.ಪಿ.ಜಾನ್ ರವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಸಿಹಿ ತಿಂಡಿಗಳನ್ನು ವಿತರಿಸಲಾಯಿತಲ್ಲದೇ, ಗೆದ್ದ ತಂಡಗಳಿಗೆ ಪ್ರಶಸ್ತಿಪತ್ರಗಳನ್ನು ನೀಡಲಾಯಿತು.