ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೇಶ ಸ್ವತಂತ್ರವಾಗುವಲ್ಲಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ, ಮಹಾತ್ಮರ ತ್ಯಾಗ, ಬಲಿದಾನ ಹಾಗೂ ಲಕ್ಷಾಂತರ ವೀರ ಯೋಧರ ಪರಾಕ್ರಮ ಹಾಗೂ ರಕ್ತತರ್ಪಣವನ್ನು ಸ್ಮರಿಸಿದಾಗ ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಲಿದೆ ಎಂದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಬೈಂದೂರು ಶಾಸಕರ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರಾಷ್ಟ್ರಧ್ವಜಾರೋಹಣಗೈದು ಮಾತನಾಡಿದರು. ನಮ್ಮ ವೀರ ಯೋಧರು ಜೀವದ ಹಂಗುತೊರೆದು ದೇಶ ರಕ್ಷಣೆ ಮಾಡಿದ ಪರಿಣಾಮ ಇಂದು ನಾವೆಲ್ಲರೂ ಕ್ಷೇಮವಾಗಿರಲು ಸಾಧ್ಯವಾಗಿದೆ. ಈ ನೆಲೆಯಲ್ಲಿ ನಾವೆಲ್ಲರೂ ಒಂದಾಗಿ ಪ್ರತಿದಿನವೂ ಯೋಧರನ್ನು ಸ್ಮರಿಸೋಣ. ನೂರಾರು ವರ್ಷಗಳಿಂದ ಎಲ್ಲಾ ಜಾತಿ, ಮತ, ಧರ್ಮದ ಜನರು ಒಂದಾಗಿ ಸೌಹಾರ್ದ ಹಾಗೂ ಸಾಮರಸ್ಯದಿಂದ ಬಾಳುತ್ತಿರುವ ನಮ್ಮ ಪರಿಸರವನ್ನು ಸಾಮಾಜಿಕ ಕಾಳಜಿ ಮೂಡಿಸುವ ಕೇಂದ್ರಗಳಾಗಿ ಪರಿವರ್ತಿಸೋಣ ಎಂಬ ಸಂದೇಶ ನೀಡಿದರು.
ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್‌ಕುಮಾರ್, ಕಾರ್ಯದರ್ಶಿ ನಾಗರಾಜ ಗಾಣಿಗ ಬಂಕೇಶ್ವರ್, ಕ್ಷೇತ್ರ ಶಿಕ್ಷಣಾಧಿಕಾರಿ ಒ. ಆರ್. ಪ್ರಕಾಶ್, ಬೈಂದೂರು, ಯಡ್ತರೆ, ಪಡುವರಿ ಗ್ರಾಪಂ ಸದಸ್ಯರು, ಶಿಕ್ಷಕರು, ಶಿಕ್ಷಣ ಇಲಾಖಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು. ಈ ಸಂದರ್ಭ ಶೈಕ್ಷಣಿಕವಾಗಿ ಸಾಧನೆಗೈದ ಕ್ಷೇತ್ರದ ನಾಲ್ಕು ವಿದ್ಯಾರ್ಥಿಗಳಿಗೆ ಶಾಸಕರು ಲ್ಯಾಪ್‌ಟಾಪ್ ನೀಡಿ ಶುಭಹಾರೈಸಿದರು. ಇದಕ್ಕೂ ಮೊದಲು ಶಾಸಕರು ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಸಕರು ತಮ್ಮ ಕ್ಷೇತ್ರದಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ ನಾಲ್ಕು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಿ ಶುಭಹಾರೈಸಿದರು.