ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರಕಾರ ಬಡವರ ಪರವಾಗಿ ಹತ್ತಾರು ಯೋಜನೆಗಳನ್ನು ಕೈಗೆತ್ತಿಕೊಂಡು ಯಶಸ್ವಿಯಾಗಿ ಜಾರಿಗೊಳಿಸುತ್ತಿದೆ. ಅರ್ಜಿದಾರರಿಗೆ 94ಸಿ ಹಕ್ಕುಪತ್ರ ವಿತರಿಸುವಲ್ಲಿ ಈ ಹಿಂದೆ ಇದ್ದ ಕಾನೂನು ತೊಡಕುಗಳನ್ನು ನಿವಾರಿಸಿ 94ಸಿ ಹಾಗೂ 94ಸಿಸಿ ಮೂಲಕ ಬಡವರಿಗೆ ಕಡಿಮೆ ಶುಲ್ಕದಲ್ಲಿ ಭೂಮಿ ಹಕ್ಕುಪತ್ರ ಸಿಗುವಂತೆ ಮಾಡಲಾಗಿದ್ದು ಕ್ಷೇತ್ರದ ಫಲಾನುಭವಿಗಳಿಗೆ ಹಂತ ಹಂತವಾಗಿ ವಿತರಿಸಲಾಗುತ್ತಿದೆ ಎಂದು ಬೈಂದೂರು ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಗೊಳಿಹೊಳೆ ಮೂರುಕೈ ಶ್ರೀ ಮಹಿಷಮರ್ಧಿನಿ ಸಭಾಭವನದಲ್ಲಿ ನಡೆದ ಗೊಳಿಹೊಳೆ ಹಾಗೂ ಕಾಲ್ತೋಡು ಗ್ರಾ.ಪಂ ವ್ಯಾಪ್ತಿಯ ಶಾಸಕರ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. ಡೀಮ್ಡ್ ಫಾರೆಸ್ಟ್‌ನಲ್ಲಿ ವಾಸವಿರುವವರಿಗೂ ಈವರೆಗೆ ಹಕ್ಕುಪತ್ರ ನೀಡಲು ಸಾಧ್ಯವಾಗಿಲ್ಲ. ಒಂದು ತಿಂಗಳಲ್ಲಿ ಸರಕಾರz ಗ್ಯಾಜೆಟ್ ನೋಟಿಪಿಕೇಶ್ ಹೊರಡಿಸಿದ ಬಳಿಕ ಅವರಿಗೂ ಹಕ್ಕಪತ್ರ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದ ಶಾಸಕರು ಕಾಲ್ತೋಡು ಹಾಗೂ ಗೋಳಿಹೊಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಮೂಲಭೂತ ಸೌಯರ್ಕಗಳ ಅಭಿವೃದ್ಧಿಗೆಅನುದಾನ ಮೀಸಲಿಡಲಾಗಿದೆ ಎಂದರು.
ಜಿ.ಪಂ ಸದಸ್ಯ ಶಂಕರ ಪೂಜಾರಿ, ತಾ.ಪಂ ಸದಸ್ಯ ಹೆಚ್. ವಿಜಯ ಶೆಟ್ಟಿ, ಜಿಲ್ಲಾ ಕೆಡಿಪಿ ಸದಸ್ಯ ಎಸ್.ರಾಜುಪೂಜಾರಿ, ಗೋಳಿಹೊಳೆ ಗ್ರಾಪಂ ಅಧ್ಯಕ್ಷ ರಾಜು ಪೂಜಾರಿ ಉಪಾಧ್ಯಕ್ಷೆ ನಾಗವೇಣಿ, ಕಾಲ್ತೋಡು ಗ್ರಾಪಂ ಅಧ್ಯಕ್ಷ ಬಿ. ಅಣ್ಣಪ್ಪ ಶೆಟ್ಟಿ ಭಟ್ನಾಡಿ, ಉಪಾಧ್ಯಕ್ಷ ರಾಜು ಪೂಜಾರಿ, ಎಪಿಎಂಸಿ ಸದಸ್ಯ ವಸಂತ ಹೆಗ್ಡೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಬೈಂದೂರು ವಿಶೇಷ ತಹಶೀಲ್ದಾರ್ ಕಿರಣ ಜಿ.ಗೌರಯ್ಯ ಸ್ವಾಗತಿಸಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಓ ಆರ್ ಪ್ರಕಾಶ ಪ್ರಸ್ತಾವಿಸಿದರು. ಸುಧಾಕರ ಪಿ. ನಿರೂಪಿಸಿದರು. ಬಳಿಕ ಗ್ರಾಮಸ್ಥರಿಂದ ವಿವಿಧ ಅವಹಾಲುಗಳನ್ನು ಸ್ವೀಕರಿಸಲಾಯಿತು. ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಕಾಲ್ತೋಡು ಗ್ರಾಪಂನಿಂದ ಇಬ್ಬರು ವಿಕಲಚೇತನರಿಗೆ ವೀಲ್‌ಚೇರ್ ವಿತರಿಸಲಾಯಿತು.