ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಹಾಗೂ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಶಿರೂರು, ಗೋಳಿಹೊಳೆ, ನಾವುಂದ ಗಂಗೊಳ್ಳಿ ಮುಂತಾದ ಭಾಗಗಳಲ್ಲಿ ಅಕ್ರಮ ಗೋಸಾಟ, ಗೋಕಳ್ಳತನ ಹಾಗೂ ಮನೆಗಳನ್ನೇ ಕಸಾಯಿಖಾನೆಗಳನ್ನಾಗಿಸಿಕೊಂಡು ಗೋ ಮಾಂಸ ದಂದೆಯನ್ನು ನಿರಾಳವಾಗಿ ನಡೆಸುತ್ತಿದ್ದು, ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಶೀಘ್ರವೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ – ಬಜರಂಗದಳ ಬೈಂದೂರು ಪ್ರಖಂಡ ಆಗ್ರಹಿಸಿದೆ.
ಕೊಟ್ಟಿಗೆಯಲ್ಲಿದ್ದ ಹಾಗೂ ಮೇಯಲು ಬಿಟ್ಟ ದನಗಳನ್ನು ಕದ್ದು, ಕತ್ತರಿಸಿ ಗೋಮಾಂಸ ಭಕ್ಷಕರಿಗೆ ಹಂಚುವ ಜಾಲ ಹಲವು ದಿನಗಳಿಂದ ಕಾರ್ಯನಿರ್ವಹಿಸುತ್ತಿದೆ. ಇತ್ತಿಚಿಗೆ ಗೋಳಿಹೊಳೆ ಗ್ರಾಮದ ಎಲ್ಲೂರಿನಲ್ಲಿ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ಐದು ದನವನ್ನು ಕದ್ದೊಯ್ದು ಒಂದು ಕರುವನ್ನೂ ಕೊಂದು ಹೋಗಿದ್ದಾರೆ. ದಿನದಿಂದ ದಿನಕ್ಕೆ ಗೋಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ರಾಜಾರೋಷವಾಗಿ ಇಂತಹ ಹೀನ ಕೃತ್ಯದಲ್ಲಿ ತೊಡಗಿಕೊಂಡಿದ್ದಾರೆ. ಪೊಲೀಸ್ ಇಲಾಖೆ ಶೀಘ್ರವೇ ತನಿಖೆ ಕೈಗೊಂಡು ಗೋಕಳ್ಳರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ತಾಲೂಕಿನಾದ್ಯಂತ ಹೋರಾಟ ರೂಪಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಬೈಂದೂರು ಪ್ರಖಂಡ ತಿಳಿಸಿದೆ.
ಬೈಂದೂರು ಪೊಲೀಸ್ ಪ್ರಬಾರ ಉಪ ನಿರೀಕ್ಷಕ ದೇವರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು. ವಿಶ್ವ ಹಿಂದೂ ಪರಿಷತ್ ಬಜರಂಗದಳದ ಬೈಂದೂರು ಪ್ರಖಂಡ ಅಧ್ಯಕ್ಷ ಶ್ರೀಧರ ಬಿಜೂರು, ತಾಲೂಕು ಸಂಚಾಲಕ ನಿತ್ಯಾನಂದ ಉಪ್ಪುಂದ, ತಾಲೂಕು ಪಂಚಾಯತ್ ಸದಸ್ಯರಾದ ಸುರೇಂದ್ರ ಖಾರ್ವಿ, ಕರಣ ಪೂಜಾರಿ, ಬಿಜೆಪಿ ಬೈಂದೂರು ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ರಾಜ್ಯ ರೈತಮೋರ್ಚಾ ಉಪಾಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷ ಶರತ್‌ಕುಮಾರ್ ಶೆಟ್ಟಿ, ಪ್ರಣಯಕುಮಾರ್ ಶೆಟ್ಟಿ, ವೀರಭದ್ರ ಶೆಟ್ಟಿ ಉಪ್ಪುಂದ, ಸಂಘಟನೆಯ ಪ್ರಮುಖರಾದ ಎಂ. ಆರ್. ಕೇಶವ್, ರಾಘವೇಂದ್ರ ಹೊಸಾಡು ಮೊದಲಾದವರು ಉಪಸ್ಥಿತರಿದ್ದರು.