ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯುವಶಕ್ತಿ ಮನಸ್ಸು ಮಾಡಿದರೆ ಸಾಮಾಜಿಕ ವ್ಯವಸ್ಥೆಯಲ್ಲಿ ಧನಾತ್ಮಕ ಬದಲಾವಣೆ ತರಲು ಸಾಧ್ಯವಿದೆ. ಬದುಕಿನಲ್ಲಿ ಏನನ್ನಾದರೂ ಸಾಧಿಸುವ ಛಲ ಯುವಕರಲ್ಲಿದೆ. ಆದರೆ ಸರಿಯಾದ ಮಾರ್ಗದಲ್ಲಿ ಮುನ್ನಡೆಸುವ, ನಿರ್ದಿಷ್ಟ ಗುರಿಯಡೆಗೆ ಅವರ ಮನಸ್ಸುನ್ನು ಕೇಂದ್ರೀಕರಿಸುವ ಕೆಲಸ ಮಾತ್ರ ನಿರಂತರವಾಗಿ ನಡೆಯಬೇಕಿದೆ. ಹಾಗಿದ್ದಾಗ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯವಿದೆ ಎಂದು ಕರ್ನಾಟಕ ಕಾರ್ಮಿಕ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಹೇಳಿದರು.
ಅವರು ಬೈಂದೂರು ಎಸ್‌ಆರ್‌ಆರ್ ಕಲಾಮಂದಿರದಲ್ಲಿ ಜರುಗಿದ ನೆಹರು ಯುವ ಕೇಂದ್ರ ಉಡುಪಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಹಾಗೂ ಕಳವಾಡಿ ಮಾರಿಕಾಂಬ ಯುತ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಜರುಗಿದ ಯುವ ಮಂಡಲ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಕೀಯದಲ್ಲಿ ಭ್ರಷ್ಟಾಚಾರವಿದೆ ಎಂದು ಯುವಕರು ದೂರವೇ ಉಳಿಯುತ್ತಾರೆ. ಆದರೆ ನಾವೇ ದೂರ ಉಳಿದರೆ ರಾಜಕೀಯವನ್ನು ಸರಿದಾರಿಯಲ್ಲಿ ಕೊಂಡ್ಯೊಯ್ಯವವರ‍್ಯಾರು. ಬದಲಾವಣೆಗೆ ಯುವಕರೇ ಮುನ್ನುಡಿ ಬರೆಯದೇ ಏನು ಸಾಧ್ಯವಿಲ್ಲ. ಚುನಾವಣೆ ಬಂದಾಗ ಹಣದ ಆಮಿಷಕ್ಕೆ ಬಲಿಯಾಗದೆ ಸಮರ್ಥರನ್ನು ಆರಿಸುವ ಬದ್ಧತೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಿದೆ. ಒಳ್ಳೆಯ ಕೆಲಸವಾದಾಗ ಪ್ರಶಂಸಿಸುವ ಹಾಗೂ ಅನ್ಯಾಯ ನಡೆದಾಗ ಪ್ರತಿಭಟಿಸುವ ಗುಣವನ್ನು ಯುವಕರು ಅಳವಡಿಸಿಕೊಂಡಾಗ ಮಾತ್ರ ವ್ಯವಸ್ಥೆ ಸರಿದಾರಿಯಲ್ಲಿ ನಡೆಯುತ್ತದೆ ಎಂದರು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿಸೋಜಾ ಮಾತನಾಡಿ ಯುವಕರ ಸಂಘಟನಾ ಶಕ್ತಿಯನ್ನು ಮತ್ತು ಬಲಗೊಳಿಸಿ ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶದಿಂದ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಯುವಕರ ಕೌಶಲಾಭಿವೃದ್ಧಿಗೆ ಒತ್ತುನೀಡಿ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಮಾಡುವ ಹಲವಾರು ಕಾರ್ಯಕ್ರಮಗಳನ್ನು ನೆಹರು ಯುವ ಕೇಂದ್ರದ ಬಳಿಯಿದ್ದು ಯುವಕರು ಇದರ ಪ್ರಯೋಜನವನ್ನು ಪಡೆದುಕೊಂಡು ಮನ್ನಡೆಬೇಕಿದೆ ಎಂದರು.
ಬೈಂದೂರು ಹಿಂದೂಳಿದ ವರ್ಗಗಳ ವಿದ್ಯಾರ್ಥಿನಿ ನಿಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸುನಿತಾ ಕಾರ್ಯಕ್ರಮ ಉದ್ಘಾಟಿಸಿದರು. ಕಳವಾಡಿ ಮಾರಿಕಾಂಬ ಯೂತ್ ಕ್ಲಬ್ ಅಧ್ಯಕ್ಷ ಪ್ರದೀಪ್‌ಕುಮಾರ್ ಶೆಟ್ಟಿ ಕಾರಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ನಿಲಯದ ವಾರ್ಡ್‌ನ್ ಮುತ್ತಪ್ಪ, ಯುತ್ ಕ್ಲಬ್ ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು. ಶಿಕ್ಷಕ ಸುಧಾಕರ ಪಿ ಕಾರ್ಯಕ್ರಮ ನಿರೂಪಿಸಿದರು.